ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಮುಂಡರಗಿ ಬಿಇಓ ವಿರುದ್ಧ ಪ್ರಕರಣ ದಾಖಲು

Update: 2020-02-21 15:38 GMT

ಗದಗ, ಫೆ. 21: ಹತ್ತನೆ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜಿಲ್ಲೆಯ ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್. ಹಳ್ಳಿಗುಡಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದು, ಬಿಇಓ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ತಾಲೂಕಿನ ಗ್ರಾಮವೊಂದರ ಹತ್ತನೆ ತರಗತಿಯಲ್ಲಿ ಓದುತ್ತಿರುವ ಅಪ್ರಾಪ್ತ ವಿದ್ಯಾರ್ಥಿ ಜೀವಿತಾ(ವಿದ್ಯಾರ್ಥಿನಿಯ ಹೆಸರು ಬದಲಾಯಿಸಲಾಗಿದೆ) ಮನೆಯಲ್ಲಿ ಒಬ್ಬಳೇ ಇರುವ ಸಂದರ್ಭದಲ್ಲಿ ಫೆ.19ರ ಬುಧವಾರ ಸಂಜೆ 5ರಿಂದ 6 ಗಂಟೆಯ ನಡುವೆ ಆಕೆಯ ನಿವಾಸಕ್ಕೆ ತೆರಳಿದ ಬಿಇಓ ವಿದ್ಯಾರ್ಥಿನಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಅವರ ಮನೆಯಲ್ಲೇ ಶೌಚಕ್ಕೆ ತೆರಳಿದ ಎಸ್.ಎನ್.ಹಳ್ಳಿಕೇರಿ ‘ವಿದ್ಯಾರ್ಥಿನಿಗೆ ನೀನು ತುಂಬಾ ಇಷ್ಟ ಆಗಿದ್ದೀಯಾ, ನಿನಗೆ ನಾನು ಬಹಳ ದಿನದಿಂದ ಮಾತನಾಡಿಸಬೇಕೆಂದುಕೊಂಡಿದ್ದೆ. ನೀನು ಯಾರನ್ನಾದರೂ ಮದುವೆ ಆಗು. ಆದರೆ, ನೀನು ನನ್ನನ್ನು ಪ್ರೀತಿಸು ಎಂದು ವಿದ್ಯಾರ್ಥಿನಿಯನ್ನು ಎಳೆದು ಅಪ್ಪಿಕೊಂಡು ಅವರಿಗೆ ಮುತ್ತು ಕೊಟ್ಟಿದ್ದಾನೆ’ ಎಂದು ಆರೋಪಿಸಲಾಗಿದೆ.

‘ಆಕೆ 9ನೆ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ಶಾಲೆಗೆ ಭೇಟಿ ನೀಡಿದ್ದ ಬಿಇಓ ಹಳ್ಳಿಗುಡಿ ವಿದ್ಯಾರ್ಥಿನಿಯನ್ನು ಎಬ್ಬಿಸಿ ನಿನಗೆ ಯಾವ ವಿಷಯ ಕಷ್ಟ ಅನಿಸುತ್ತದೆ. ನೀನು ಮುಂದೆ ಏನು ಮಾಡಬೇಕೆಂದುಕೊಂಡಿದ್ದೀಯ ಎಂದು ವಿಚಾರಿಸಿದ್ದರು. ಅಂದಿನಿಂದ ಬಿಇಓ ವಿದ್ಯಾರ್ಥಿನಿಗೆ ಪರಿಚಯವಿತ್ತು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಮಧ್ಯೆ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ವಿಚಾರ ತಿಳಿದ ಗ್ರಾಮದ ನಾಲ್ಕೈದು ಯುವಕರು ಬಿಇಓ ಹಳ್ಳಿಗುಡಿ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ಬಿಇಓ ಪೊಲೀಸರಿಗೆ ದೂರು ನೀಡಿದ್ದಾರೆಂದು ಗೊತ್ತಾಗಿದೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News