6 ತಿಂಗಳಲ್ಲಿ ಸಿದ್ದರಾಮಯ್ಯರ ಬಣ್ಣ ಬಯಲು ಮಾಡುತ್ತೇನೆ: ಸಿಎಂ ಯಡಿಯೂರಪ್ಪ

Update: 2020-02-21 16:52 GMT
ಫೈಲ್ ಫೋಟೋ

ಮೈಸೂರು,ಫೆ.21: ಬಿಜೆಪಿಗೆ ಜನರು ಬಡಿಗೆ ತೆಗೆದುಕೊಂಡು ಹೊಡೀತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಒಮ್ಮೆ ಅವರು ಮಾಡಿದ ಕೆಲಸ ಮೆಲುಕು ಹಾಕಿ ನೋಡಲಿ. ಆಗ ಜನರು ಯಾರಿಗೆ ಬಡಿಗೆ ತೆಗೆದುಕೊಂಡು ಹೊಡಿತಾರೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಯಡಿಯೂರಪ್ಪ ಅವರು, ಸಿದ್ದರಾಮಯ್ಯ 5 ವರ್ಷ ಆಡಳಿತ ಮಾಡಿದರು. ಕುಮಾರಸ್ವಾಮಿ ಒಂದೂವರೆ ವರ್ಷ ಆಡಳಿತ ಮಾಡಿದರು. ನಿಮ್ಮ ಆಡಳಿತದಲ್ಲಿ ನೀವು ಏನ್ ಮಾಡಿದ್ದೀರಿ ? ಯಡಿಯೂರಪ್ಪ 6 ತಿಂಗಳಾಯ್ತು ಅಧಿಕಾರಕ್ಕೆ ಬಂದು. ಇನ್ನು 6 ತಿಂಗಳಲ್ಲಿ ನಮ್ಮ ಆಡಳಿತ ಹೇಗಿರಲಿದೆ ಎಂದು ಅವರಿಗೆ ಗೊತ್ತಾಗುತ್ತದೆ. 6 ತಿಂಗಳಲ್ಲಿ ಸಿದ್ದರಾಮಯ್ಯನವರ ಬಣ್ಣ ಬಯಲು ಮಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಬಜೆಟ್ ಸಿದ್ಧತೆ ಬಗ್ಗೆ ಮಾತನಾಡಿದ ಯಡಿಯೂರಪ್ಪ, ಈ ಬಾರಿ ಬಜೆಟ್ ರೈತರ ಹಾಗೂ ಕೃಷಿಗೆ ಆದ್ಯತೆಯ ಬಜೆಟ್ ಆಗಲಿದೆ. ರೈತರಿಗೆ ಹೆಚ್ಚಿನ ಆದ್ಯತೆ ಕೊಡುತ್ತೇವೆ.‌ ನೆರೆ ಸಂತ್ರಸ್ತರಿಗೆ ನಾವು ಎಲ್ಲ ಸಹಾಯ ಮಾಡಿದ್ದೇವೆ. ಚಿಕ್ಕ ಪುಟ್ಟ ಲೋಪವಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನದಲ್ಲಿ ಎಷ್ಟು ಖೋತಾ ಆಗಿದೆ ಎಂಬುದು ಲೆಕ್ಕ ಹಾಕುತ್ತಿದ್ದೇವೆ. ಅದನ್ನೆಲ್ಲ ಸರಿದೂಗಿಸಿ ಬಜೆಟ್ ಮಾಡುತ್ತೇವೆ ಎಂದರು.

ಮಾರ್ಚ್ 5ಕ್ಕೆ ಬಜೆಟ್ ಮಂಡನೆ ಮಾಡುತ್ತಿದ್ದೇವೆ. ಈಗಾಗಲೇ ಅದರ ಬಗ್ಗೆ ಸಿದ್ಧತೆ ನಡೆದಿದೆ. 3ನೇ ತಾರೀಖಿನ ಒಳಗೆ ಅದಕ್ಕೊಂದು ರೂಪ ಕೊಡುವ ಪ್ರಯತ್ನ ಆಗಲಿದೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಳಸಾ ಬಂಡೂರಿ ಯೋಜನೆ ಸಮಸ್ಯೆ ಬಗೆ ಹರಿದಿರೋದು ಸಂತಸ ತಂದಿದೆ. ಅದಕ್ಕೆ ಈ ಬಜೆಟ್ ನಲ್ಲಿ ಹಣ ತೆಗೆದಿಟ್ಟು ಆದಷ್ಟು ಬೇಗ ನೀರಾವರಿ ಯೋಜನೆ ಚಾಲನೆ ಮಾಡುವುದು ನನ್ನ ಮೊದಲ ಆದ್ಯತೆ ಎಂದು ಸಿಎಂ ತಿಳಿಸಿದರು.

ವಿಧಾನಸಭೆ ಅಧಿವೇಶನದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಸರ್ಕಾರ ರಚನೆಯಾಗಿ 7 ತಿಂಗಳಾಗಿದೆ. ರಾಜ್ಯದ ಜನರಿಗೆ ನಮ್ಮ ಅಭಿವೃದ್ಧಿ ಕಾರ್ಯಕ್ರಮ ತಿಳಿಯಲು ಇನ್ನು 5-6 ತಿಂಗಳು ಬೇಕಾಗಲಿದೆ. ಇನ್ನು 6 ತಿಂಗಳಲ್ಲಿ ಜನ ಮೆಚ್ಚುವ ಅಭಿವೃದ್ಧಿ ಕಾರ್ಯ ಮಾಡುವ ವಿಶ್ವಾಸ ಇದೆ. ನೆರೆ ಸಂತ್ರಸ್ತರಿಗೆ ಏನೇನು ಮಾಡಬೇಕೋ ನಮ್ಮ ಶಕ್ತಿಮೀರಿ ಮಾಡಿದ್ದೇವೆ. ಅಲ್ಲಿ ಇಲ್ಲಿ ಕೊರತೆ ಅಗಿದ್ದರೆ ಅದನ್ನು ಸರಿಪಡಿಸಲಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News