ತೊಗರಿ ಖರೀದಿಗೆ ಕೇಂದ್ರದ ಅವೈಜ್ಞಾನಿಕ ಮಿತಿ: ವಂಚನೆಗೊಳಗಾಗಲಿರುವ ರೈತರು ?

Update: 2020-02-21 16:53 GMT

ಬೆಂಗಳೂರು, ಫೆ.21: ಕೇಂದ್ರ ಸರಕಾರದ ಅವೈಜ್ಞಾನಿಕ ಮಿತಿಯಿಂದಾಗಿ ಲಕ್ಷಾಂತರ ತೊಗರಿ ಬೆಳೆಗಾರರು ಬೆಂಬಲ ಬೆಲೆಯಿಂದ ವಂಚಿತರಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಈ ಬಾರಿ ತೊಗರಿ ಬೆಳೆ ಭರ್ಜರಿಯಾಗಿದ್ದು, ಅಂದಾಜು 13-14 ಲಕ್ಷ ಟನ್ ತೊಗರಿಯನ್ನು ಬೆಳೆಯಲಾಗಿದೆ. ಆದರೆ, ಅಧಿಕಾರಿಗಳು ನೀಡಿದ ತಪ್ಪು ಮಾಹಿತಿಯಿಂದಾಗಿ ಕೇವಲ 7.34 ಲಕ್ಷ ಟನ್ ಉತ್ಪಾದನೆ ಎಂಬ ಲೆಕ್ಕಾಚಾರವಿದೆ. ಈ ಪೈಕಿ ಶೇ.25 ರಷ್ಟು ಖರೀದಿಗೆ ಕೇಂದ್ರ ಸರಕಾರ ಅನುಮತಿ ನೀಡಲಿದೆ. ಇದರಂತೆ 1.85 ಲಕ್ಷ ಟನ್ ತೊಗರಿಗೆ ಬೆಂಬಲ ಬೆಲೆ ಸಿಗಲಿದೆ.

ಪ್ರತಿ ರೈತರಿಂದ 10 ಕ್ವಿಂಟಾಲ್ ಖರೀದಿ ಮಿತಿಯಿದ್ದುದರಿಂದ ನೋಂದಾಯಿತರ ಪೈಕಿ 1.85 ಲಕ್ಷ ರೈತರಿಂದ ಖರೀದಿಯಾಗಲಿದೆ. ಆದರೆ, ಉಳಿದವರು ಬೆಂಬಲ ಬೆಲೆಯಿಂದ ವಂಚಿತರಾಗಲಿದ್ದಾರೆ. ತೊಗರಿ ಕಣಜವಾದ ಉತ್ತರ ಕರ್ನಾಟಕ ಭಾಗದಿಂದಲೇ ಒಂದೂವರೆ ಲಕ್ಷಕ್ಕೂ ಅಧಿಕ ರೈತರು ಬೆಂಬಲ ಬೆಲೆಗೆ ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ, ಫೆ.25 ರವರೆಗೂ ನೋಂದಣಿಗೆ ಅವಕಾಶವಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಳ್ಳುತ್ತಾರೆ.

ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ಮಿತಿ ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ಲಕ್ಷಾಂತರ ರೈತರು ಬೆಂಬಲ ಬೆಲೆಯಿಂದ ವಂಚಿತರಾಗುವ ಸಾಧ್ಯತೆ ದಟ್ಟವಾಗಿದೆ. ಬೆಂಬಲ ಬೆಲೆಯಲ್ಲಿ ತೊಗರಿ ಮಾರಿದರೆ ರೈತರಿಗೆ ಕೇಂದ್ರ ನಿಗದಿಪಡಿಸಿದ 5800 ರೂ. ಹಾಗೂ ರಾಜ್ಯದ 300 ರೂ. ಪ್ರೋತ್ಸಾಹಧನ ಸೇರಿ ಕ್ವಿಂಟಾಲ್‌ಗೆ 6100 ರೂ. ಸಿಗುತ್ತದೆ. ಹೀಗಾಗಿ, ಬೆಂಬಲ ಬೆಲೆಯಲ್ಲಿ ಮಾರಾಟಕ್ಕೆ ರೈತರು ಹಾತೊರೆಯುತ್ತಿದ್ದಾರೆ.

ರಾಜ್ಯ ಸರಕಾರವು ಈವರೆಗೂ ಸುಮಾರು 3,45,106 ಕ್ವಿಂಟಾಲ್ ತೊಗರಿಯನ್ನುಮ 39,091 ರೈತರಿಂದ ಖರೀದಿಸಿದೆ. 2019-20 ನೆ ಸಾಲಿನಲ್ಲಿ 13.35 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿದ್ದು, ಅಂದಾಜು 12.02 ಲಕ್ಷ ಮೆಟ್ರಿಕ್‌ ಟನ್ ಉತ್ಪಾದನೆಯ ನಿರೀಕ್ಷೆಯಿದೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News