ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ: 'ಪ್ರಶ್ನೆ ಪತ್ರಿಕೆ ಸೋರಿಕೆ' ಬಗ್ಗೆ ಸುರೇಶ್‌ ಕುಮಾರ್ ಪ್ರತಿಕ್ರಿಯೆ

Update: 2020-02-21 16:57 GMT

ಬೆಂಗಳೂರು, ಫೆ.21: ಎಸೆಸೆಲ್ಸಿ ಪರೀಕ್ಷೆಯ ಮಾದರಿ ಯಾವ ರೀತಿಯಲ್ಲಿರುತ್ತದೆ ಎನ್ನುವ ಪರಿಚಯ ಮಕ್ಕಳಿಗಾಗಲಿ ಎನ್ನುವ ಉದ್ದೇಶದಿಂದ ಈ ಬಾರಿ ಪರೀಕ್ಷಾ ಮಂಡಳಿಯೇ ಬಹುಪಾಲು ಶಾಲೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಪೂರೈಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸುಮಾರು 1500 ಪ್ರೌಢ ಶಾಲೆಗಳ ಪೈಕಿ ಸುಮಾರು 2500 ಶಾಲೆಗಳಲ್ಲಿ ಶಿಕ್ಷಕರ ಸಂಘಟನೆಗಳು ನಡೆಸಿದ ಪರೀಕ್ಷೆಗಳನ್ನು ಹೊರತುಪಡಿಸಿ ಉಳಿದೆಲ್ಲ ಶಾಲೆಗಳಿಗೆ ಮಂಡಳಿ ಮುಂಚಿತವಾಗಿಯೇ ಮುದ್ರಿತ ಪ್ರಶ್ನೆ ಪತ್ರಿಕೆಗಳನ್ನು ಪೂರೈಸಿದೆ ಎಂದು ಅವರು ಹೇಳಿದ್ದಾರೆ.

ಪರೀಕ್ಷೆಗಳು ಆಯಾ ಶಾಲೆಗಳಲ್ಲಿಯೇ, ಆಯಾ ಮುಖ್ಯ ಶಿಕ್ಷಕಿ-ಶಿಕ್ಷಕರ ಮೇಲ್ವಿಚಾರಣೆಯಲ್ಲಿಯೇ ನಡೆದಿವೆ. ಶಾಲಾ ಮುಖ್ಯಸ್ಥರು ಈ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿ ಹೊಂದಿರುವುದು, ಅವರ ಕೈಗೆ ಪ್ರಶ್ನೆ ಪತ್ರಿಕೆಗಳು ಮುಂಚೆಯೇ ತಲುಪಿರುವುದು ಇಂತಹ ಪರಿಸ್ಥಿತಿಗೆ ಕಾರಣ ಆಗಿರಬಹುದು. ಇದು ಒಂದು ರೀತಿಯ ನೈತಿಕ ಜವಾಬ್ದಾರಿಯ ಪ್ರಶ್ನೆಯಾಗಿತ್ತು ಎಂದು ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಇಷ್ಟೆಲ್ಲ ಆದರೂ, ಈ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಎಂಬ ಕಲ್ಪನೆಯಿಂದ ಗ್ರಹಿಸುವುದೇ ಸರಿಯಲ್ಲ ಎನ್ನುವುದು ನನ್ನ ಭಾವನೆ. ಮೇಲಾಗಿ, ಅಂತಿಮ ಪರೀಕ್ಷಾ ವ್ಯವಸ್ಥೆ ಬೇರೆಯೇ ಆಯಾಮವನ್ನು ಹೊಂದಿರುತ್ತದೆ ಎಂದು ಅವರು ಹೇಳಿದ್ದಾರೆ.

ಎರಡೂವರೆ ಸಾವಿರ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಸಂಪೂರ್ಣ ವಿಭಿನ್ನವಾಗಿ, ಅತ್ಯಂತ ಸುರಕ್ಷಿತವಾಗಿ ನಿರ್ವಹಿಸುವ ವ್ಯವಸ್ಥೆ ಹಿಂದಿನಿಂದಲೂ ಜಾರಿಯಲ್ಲಿದ್ದು, ಅದನ್ನೇ ಈ ಬಾರಿಯೂ ನಿರ್ವಹಿಸಲಾಗುವುದು. ಅದರ ಬಗ್ಗೆ ಯಾವ ಗೊಂದಲಕ್ಕೆ, ಆತಂಕಕ್ಕೆ ಅವಕಾಶವಿಲ್ಲ ಎಂದು ಸುರೇಶ್ ಕುಮಾರ್ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News