ಕುಸ್ತಿ ಹಬ್ಬಕ್ಕೆ ಧಾರವಾಡ ಸಿದ್ಧ: ಸಡಗರದಿಂದ ಕಣವನ್ನು ಅಣಿಗೊಳಿಸಿದ ಪೈಲ್ವಾನರ ಪಡೆ

Update: 2020-02-21 17:20 GMT

ಧಾರವಾಡ, ಫೆ.21: ಪೇಡಾ ನಗರಿ ಧಾರವಾಡದಲ್ಲಿ ಫೆ.22 ರಿಂದ 25ರವರೆಗೆ ನಡೆಯಲಿರುವ ಕರ್ನಾಟಕ ಕುಸ್ತಿ ಹಬ್ಬಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಸಾಂಪ್ರದಾಯಿಕ ಹಾಗೂ ವೈಜ್ಞಾನಿಕವಾಗಿ ಕುಸ್ತಿಯ ಕಣವನ್ನು ಪೈಲ್ವಾನರ ಪಡೆ ಸಿದ್ಧಗೊಳಿಸಿದೆ.

ಶನಿವಾರದಿಂದ ನಾಲ್ಕು ದಿನಗಳ ಕಾಲ ಕರ್ನಾಟಕ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಕರ್ನಾಟಕ ಕುಸ್ತಿ ಹಬ್ಬದ ಪ್ರಯುಕ್ತ ಮೂರು ಕುಸ್ತಿ ಕಣವನ್ನು ಸಿದ್ಧಗೊಳಿಸಲಾಗಿದೆ.

ಎಲ್ಲೆಲ್ಲೂ ಹಳದಿ ಬಣ್ಣ; ಮೈ, ಕೈ, ಮುಖಕ್ಕೆ ಅರಿಶಿಣ ಹಚ್ಚಿಕೊಂಡು ಕಣವನ್ನು ಸಿದ್ದಗೊಳಿಸಿದ ಚಿಣ್ಣರು. 3 ಸಾವಿರ ನಿಂಬೆಹಣ್ಣು, 3 ಕ್ವಿಂಟಾಲ್ ಅರಿಶಿಣ, 3 ಕ್ವಿಂಟಾಲ್ ಸಾಸಿವೆ ಎಣ್ಣೆ, 30 ಕೆ.ಜಿ.ಕರ್ಪೂರ ಹಾಗೂ 500 ಲೀಟರ್ ಮಜ್ಜಿಗೆ ಸೇರಿದಂತೆ ವಿವಿಧ ಸಾವಯವ ವಸ್ತುಗಳನ್ನು ಹಿರಿಯ ಪೈಲ್ವಾನರ ಮಾರ್ಗದರ್ಶನದಲ್ಲಿ ಮಿಶ್ರಣ ಮಾಡಿದರು.

ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಅಧ್ಯಕ್ಷ ರತನ್ ಕುಮಾರ್ ಮಠಪತಿ, ಈ ಕುಸ್ತಿ ಹಬ್ಬಕ್ಕೆ ರಾಜ್ಯ ಸರಕಾರ ಎರಡು ಕೋಟಿ ರೂ.ಬಿಡುಗಡೆ ಮಾಡಿದೆ. ಫೆ.22 ರಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಹಬ್ಬದಲ್ಲಿ ಒಟ್ಟು 1200 ಜನ ಪೈಲ್ವಾನರು ಭಾಗವಹಿಸಲಿದ್ದಾರೆ ಎಂದರು.

ಕಳೆದ ವರ್ಷ ಈ ಹಬ್ಬ ಬೆಳಗಾವಿಯಲ್ಲಿ ನಡೆದಿತ್ತು. ಈ ಬಾರಿ ಧಾರವಾಡಕ್ಕೆ ಆತಿಥ್ಯದ ಅವಕಾಶ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪೈಲ್ವಾನ ಸಂಘದವರಿಗೆ ಕುಸ್ತಿ ಕಣವನ್ನು ತಯಾರು ಮಾಡುವ ಜವಾಬ್ದಾರಿಯನ್ನು ಜಿಲ್ಲಾಡಳಿತ ವಹಿಸಿದೆ ಎಂದು ಅವರು ಹೇಳಿದರು.

ಸಾಸಿವೆ ಎಣ್ಣೆ, ಅರಿಶಿಣ ಪುಡಿ, ಕರ್ಪೂರ, ನಿಂಬೆಹಣ್ಣುಗಳನ್ನು ಮಿಶ್ರ ಮಾಡಿ ಕಣದಲ್ಲಿ ಮಿಶ್ರಣ ಮಾಡಲಾಗುತ್ತದೆ. ಬಳಿಕ ಮಜ್ಜಿಗೆಯನ್ನು ಸಿಂಪಡಿಸಿ ಕಣವನ್ನು ಸಿದ್ಧಗೊಳಿಸಲಾಗುತ್ತೆ. ಈ ರೀತಿ ಕಣ ತಯಾರಿಸಲು ವೈಜ್ಞಾನಿಕ ಹಿನ್ನೆಲೆಯೂ ಇದೆ. ಸಣ್ಣ ಪುಟ್ಟ ಗಾಯಗಳು ತ್ವರಿತವಾಗಿ ಶಮನಗೊಳ್ಳುತ್ತವೆ. ಬೆವರಿನ ದುರ್ಗಂಧ ಹರಡದಂತೆ ಉತ್ತಮ ಪರಿಮಳ ಕಾಪಾಡಿಕೊಳ್ಳಲು ಈ ಕುಸ್ತಿ ಚಟ್ನಿ ಸಹಕಾರಿಯಾಗಲಿದೆ ಎಂದು ರತನ್‌ ಕುಮಾರ್ ತಿಳಿಸಿದರು.

ಹೆಸರು ನೋಂದಣಿ: ಕುಸ್ತಿ ಹಬ್ಬದಲ್ಲಿ ಭಾಗವಹಿಸಲಿರುವ ಕುಸ್ತಿಪಟುಗಳಿಗೆ, ತರಬೇತಿದಾರರಿಗೆ ಹಾಗೂ ನಿರ್ಣಾಯಕರಿಗೆ ಹೆಸರನ್ನು ನೋಂದಾಯಿಸಲು ಕರ್ನಾಟಕ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ ನೋಂದಣಿ ವ್ಯವಸ್ಥೆ ಕಲ್ಪಿಸಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ ಕುಸ್ತಿಪಟುಗಳ ನೋಂದಣಿ ಮತ್ತು ದೇಹ ತೂಕ ಕಾರ್ಯ ತೆಗೆದುಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 94800 22038, 80732 56959, 94819 80689, 94819 66245, 95352 02017, 92068 64886, 96320 43415, 94806 95184 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News