ಕೊಪ್ಪ: 'ಪಾಕಿಸ್ತಾನ್ ಝಿಂದಾಬಾದ್' ಘೋಷಣೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Update: 2020-02-21 17:50 GMT

ಕೊಪ್ಪ, ಫೆ.21: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಕೊಪ್ಪ ಮೂಲದ ಅಮೂಲ್ಯ ಲಿಯೊನ್ ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿರುವುದನ್ನು ಖಂಡಿಸಿ ಶುಕ್ರವಾರ ಕೊಪ್ಪ ಪಟ್ಟಣದಲ್ಲಿ ವಿವಿಧ ಪಕ್ಷ ಹಾಗೂ ಸಂಘಟನೆಗಳು ಪ್ರತಿಭಟನೆ ನಡೆಸಿ ಅಮೂಲ್ಯಳ ಪ್ರತಿಕೃತಿ ದಹನ ಮಾಡಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬೆಳಗ್ಗೆ 11ಕ್ಕೆ ಪಟ್ಟಣದ ಪುರಭವನದಲ್ಲಿ ನೂರಾರು ಸಂಖ್ಯೆಯಲ್ಲಿ ಸಮಾವೇಶಗೊಂಡ ವಿವಿಧ ಪಕ್ಷ ಹಾಗೂ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ಪಟ್ಟಣದ ಮುಖ್ಯ ರಸ್ತೆಯಲ್ಲಿ ತ್ರಿವರ್ಣ ಧ್ವಜ ಹಿಡಿದು ಅಮೂಲ್ಯಳಿಗೆ ಧಿಕ್ಕಾರ ಹಾಕುತ್ತಾ ಬಸ್‍ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದರು. 

ಬಿಜೆಪಿ ಮುಖಂಡ ಪುಣ್ಯಪಾಲ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಮಲೆನಾಡನ್ನು ರಾಷ್ಟ್ರಕವಿ ಕುವೆಂಪುರವರ ಸಾಹಿತ್ಯಕ್ಕಾಗಿ, ಇಲ್ಲಿನ ಶುದ್ಧ ಸಂಸ್ಕೃತಿ ಮತ್ತು ಪರಿಸರಕ್ಕಾಗಿ ದೇಶದ ಜನ ಸ್ಮರಿಸುತ್ತಾರೆ. ಆದರೆ ಈಗ ಅತ್ಯಂತ ಕೆಟ್ಟ ಕಾರಣಕ್ಕಾಗಿ ಕೊಪ್ಪ ಹೆಸರಾಗುತ್ತಿರುವುದು ಬೇಸರ ತಂದಿದೆ ಎಂದರು. ಸಿಎಎ ರಾಜ್ಯಸಭೆಯಲ್ಲಿ ಅಂಗೀಕಾರವಾದ ಬಳಿಕ ಲಾಲ್ ಬಹದ್ದೂರ್ ಶಾಸ್ತ್ರೀ ಕ್ರೀಡಾಂಗಣದಿಂದ ದೆಹಲಿಯ ಶಾಹೀನ್‍ ಬಾಗ್‍ ನವರೆಗೆ ಪ್ರತಿಭಟನೆಯ ಕೊಂಡಿಗಳು ಬಿಚ್ಚಿಕೊಂಡವು. ಇದರ ಹಿಂದೆ ಒಂದು ದೊಡ್ಡ ವ್ಯವಸ್ಥಿತ ಷಡ್ಯಂತ್ರ ಇದೆ. ದೇಶದಲ್ಲಿ ಅರಾಜಕತೆಯನ್ನು ಸೃಷ್ಠಿ ಮಾಡಿ ದೇಶವನ್ನು ಒಡೆಯುವ ಕಾಂಗ್ರೆಸ್‍ನ ಕುತಂತ್ರ ಇದೆ. ಕಮ್ಯುನಿಸ್ಟರು ನಿಂತಿದ್ದಾರೆ. ಅಮಾಯಕ ಮುಸ್ಲಿಮರನ್ನು, ಪಕ್ಷದ ಕಾರ್ಯಕರ್ತರನ್ನು ಬಳಸಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಠಿ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಹೇಳಿದರು.  

ಸಂಪತ್ ಸಿಗದಾಳ್ ಮಾತನಾಡಿ, ಈ ಮಣ್ಣಿನಲ್ಲಿ ಹುಟ್ಟಿ, ಇಲ್ಲಿನ ಅನ್ನ ತಿಂದು ಬೇರೆ ದೇಶಕ್ಕೆ ಜೈಕಾರ ಹಾಕುವ ಅಮೂಲ್ಯನಂತವರಿಗೆ ನಮ್ಮ ಧಿಕ್ಕಾರವಿದೆ. ಇವರಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ಮನಸ್ಸುಗಳ ವಿರುದ್ದ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.

ಪ್ರತಿಭಟನೆಯಲ್ಲಿ ರಾಕೇಶ್ ಹಿರೇಕೊಡಿಗೆ, ಶರತ್ ಭಂಡಿಗಡಿ, ಶರತ್ ಮತ್ತಿತರರು ಮಾತನಾಡಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಶಾಸಕ ಡಿ.ಎನ್. ಜೀವರಾಜ್, ಎಸ್.ಎನ್. ರಾಮಸ್ವಾಮಿ, ಎಚ್.ಕೆ. ದಿನೇಶ್, ಎಂ.ಕೆ. ಕಿರಣ್, ಬಿ.ಕೆ. ಗಣೇಶ್‍ ರಾವ್, ಉದಯ್ ಎನ್.ಕೆ. ಸತೀಶ್ಚಂದ್ರ ಶೆಟ್ಟಿ, ಅನ್ನಪೂರ್ಣ ನರೇಶ್, ಕೆ.ವಿ. ಮಹೇಶ್ ಕುಮಾರ್ ಕಟ್ಟಿನಮನೆ, ಸತೀಶ್ ಪೂಜಾರಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News