ಮಂಗಳೂರು ಗೋಲಿಬಾರ್: ತನಿಖೆಯಾಗುವುದು ಯಾರಿಗೆ ಬೇಡ?

Update: 2020-02-22 05:58 GMT

ಈ ನಾಡಿನ ಕಾನೂನು ವ್ಯವಸ್ಥೆ ಅಧ್ವಾನವಾಗುವುದು ಕೇವಲ ದುಷ್ಕರ್ಮಿಗಳಿಂದಷ್ಟೇ ಅಲ್ಲ. ಕಾನೂನು ತನ್ನ ಕೆಲಸವನ್ನು ಸಂವಿಧಾನ ಬದ್ಧವಾಗಿ ನಿರ್ವಹಿಸದೇ ಇದ್ದಾಗಲೂ ಸಮಾಜ ಅರಾಜಕತೆಗೆ ತಳ್ಳಲ್ಪಡುತ್ತದೆ. ನಮ್ಮ ನಡುವಿನ ಅಪರಾಧ ಕೃತ್ಯಗಳ ಹಿಂದೆ ದುಷ್ಕರ್ಮಿಗಳ ಪಾತ್ರ ಎಷ್ಟಿದೆಯೋ, ಅದರ ದುಪ್ಪಟ್ಟು ಪಾತ್ರ ಕಾನೂನು ನಿರ್ವಹಿಸಬೇಕಾಗಿದ್ದ ಖಾಕಿಧಾರಿಗಳ ವೈಫಲ್ಯದಲ್ಲಿದೆ. ಇಂದು ದೇಶಾದ್ಯಂತ ಸಂಘಪರಿವಾರ ಕಾರ್ಯಕರ್ತರು, ಗೋರಕ್ಷಕರು, ಸಂಸ್ಕೃತಿ ರಕ್ಷಕರ ವೇಷದಲ್ಲಿ ಜನಸಾಮಾನ್ಯರ ಬದುಕನ್ನು ಆತಂಕದಲ್ಲಿ ತಳ್ಳಿರುವುದರ ಹಿಂದೆ ಪೊಲೀಸರ ನೇರ ಪಾತ್ರವಿದೆ ಎಂಬ ಆರೋಪಗಳಿವೆ. ನಕಲಿ ಗೋರಕ್ಷಕರು ಮತ್ತು ಪೊಲೀಸರ ನಡುವೆ ಇರುವ ಒಳ ಒಪ್ಪಂದಗಳು ಹಲವು ಪ್ರಕರಣಗಳಲ್ಲಿ ಬಯಲಾಗಿವೆ. ಆದುದರಿಂದ ಈ ನಾಡಿನಲ್ಲಿ ಖಾಕಿ ವೇಷಧಾರಿಗಳು ಮಾಡಿದ್ದೆಲ್ಲ ಕಾನೂನು ಪರವಾಗಿಯೇ ಇರಬೇಕಾಗಿಲ್ಲ.

ಪೊಲೀಸರೇ ದುಷ್ಕರ್ಮಿಗಳ, ಮೂಲಭೂತವಾದಿಗಳ, ದೇಶದ್ರೋಹಿಗಳ ಜೊತೆಗೆ ಕೈಜೋಡಿಸಿರುವ ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುತ್ತಿವೆ. ಕಾಶ್ಮೀರದಲ್ಲಿ ಬಂಧಿತನಾದ ಹಿರಿಯ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಭಯೋತ್ಪಾದಕರೊಂದಿಗೆ ಶಾಮೀಲಾಗಿ ದೇಶದ ವಿರುದ್ಧ ನಡೆಸಿದ ಕೃತ್ಯಗಳು ಇತ್ತೀಚೆಗೆ ಬಯಲಾಯಿತು. ಸಂಸತ್ ಮೇಲೆ ನಡೆದ ದಾಳಿಯಲ್ಲಿ ಈತನ ಪಾತ್ರವಿರುವುದು ಬೆಳಕಿಗೆ ಬಂದಿದೆ. ಉಡುಪಿಯಲ್ಲಿ ದನದ ವ್ಯಾಪಾರಿಯ ಹತ್ಯೆಯಲ್ಲಿ ಸಂಘಪರಿವಾರದ ಜೊತೆಗೆ ಹೇಗೆ ಪೊಲೀಸರು ಶಾಮೀಲಾಗಿದ್ದರು ಎನ್ನುವುದು ಪೊಲೀಸ್ ತನಿಖೆಯಿಂದಲೇ ಬಯಲಾಗಿತ್ತು. ಸಿಎಎ ಪ್ರತಿಭಟನೆಯ ಸಂದರ್ಭದಲ್ಲಿ ಉತ್ತರ ಪ್ರದೇಶ ಮತ್ತು ಜಾಮಿಯಾದಲ್ಲಿ ಪೊಲೀಸರ ಪೊಲೀಸರು ಎಸಗಿದ ಕ್ರೌರ್ಯ ಇದೀಗ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಲ್ಲಿವೆ. ಹೀಗಿರುವಾಗ, ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ‘ನ್ಯಾಯಾಂಗ ತನಿಖೆಯ ಅಗತ್ಯವೇ ಇಲ್ಲ’ ಎಂದು ಗೃಹ ಸಚಿವರು ಯಾವ ಆಧಾರದಲ್ಲಿ ನಿರ್ಣಯಕ್ಕೆ ಬಂದಿದ್ದಾರೆ? 

ಪ್ರತಿಭಟನಾಕಾರರು ಯಾವುದೇ ಸಂಘಟನೆಗೆ, ಸಮುದಾಯಕ್ಕೆ ಸೇರಿರಲಿ, ಅವರು ನಿಜಕ್ಕೂ ಮಂಗಳೂರಿನಲ್ಲಿ ಹಿಂಸಾಚಾರ ನಡೆಸಲು, ಪೊಲೀಸರ ವಿರುದ್ಧ ದಾಳಿ ನಡೆಸಲು ಸಂಚು ನಡೆಸಿದ್ದರೆ ಕಠಿಣ ಶಿಕ್ಷೆಗೆ ಅರ್ಹರು. ಪೊಲೀಸರ ಮೇಲೆ ನೇರ ದಾಳಿಯೆಂದರೆ, ಅದು ನೇರವಾಗಿ ಕಾನೂನು ಸುವ್ಯವಸ್ಥೆಯ ಮೇಲೆ ನಡೆದ ದಾಳಿ. ಇದರಿಂದ ನಲುಗಿದವರು ಕೇವಲ ಪೊಲೀಸರೋ ಅಥವಾ ಅಂದು ಸ್ಥಳದಲ್ಲಿದ್ದ ಅಮಾಯಕರೋ ಅಲ್ಲ, ಇಡೀ ಮಂಗಳೂರು ನಗರ ಕರ್ಫ್ಯೂ ಬಾಧಿತವಾಗಿ ಹಿಂಸೆ ಅನುಭವಿಸಿತು. ಜನರು ‘ಮುಂದೇನು ಸಂಭವಿಸಲಿದೆಯೋ?’ ಎಂದು ವಾರಗಳ ಕಾಲ ಆತಂಕದಿಂದ ಬದುಕಿದರು. ರಾಜ್ಯದ ಅಭಿವೃದ್ಧಿಯ ಪ್ರಮುಖ ಕೇಂದ್ರವಾಗಿರುವ ಮಂಗಳೂರಿನ ಕುರಿತಂತೆ ಒಂದು ಕೆಟ್ಟ ಚಿತ್ರಣವನ್ನು ಗೋಲಿಬಾರ್ ಪ್ರಕರಣ ದೇಶಕ್ಕೆ ನೀಡಿತು. ಪೊಲೀಸರ ಬಗ್ಗೆಯೂ ದೇಶಾದ್ಯಂತ ತಪ್ಪು ಭಾವನೆಗಳನ್ನು ಹರಡಿದೆ. ಈ ಎಲ್ಲ ಕಳಂಕಗಳನ್ನು ಹೋಗಲಾಡಿಸಬೇಕಾದರೆ ಘಟನೆಗೆ ನಿಜಕ್ಕೂ ಯಾರು ಕಾರಣರೋ ಅವರಿಗೆ ಶಿಕ್ಷೆಯಾಗಬೇಕಾಗಿದೆ. ಆದರೆ ಇಂದು ಗೋಲಿಬಾರ್ ನಡೆಸಿದವರು ಪೊಲೀಸರು ತಮಗೆ ತಾವೇ ಕ್ಲೀನ್‌ಚಿಟ್ ನೀಡಿದ್ದಾರೆ. ಈ ನಾಡಿನ ಗೃಹಸಚಿವರು, ಕಟಕಟೆಯಲ್ಲಿ ನಿಂತಿರುವ ಪೊಲೀಸರ ಹೇಳಿಕೆಯ ಆಧಾರದಲ್ಲೇ ಯಾರು ಅಪರಾಧಿಗಳು, ಯಾರು ಅಮಾಯಕರು ಎನ್ನುವುದರ ತೀರ್ಪನ್ನು ಅಧಿವೇಶನದಲ್ಲಿ ಘೋಷಿಸಿದ್ದಾರೆ. ಸಂತ್ರಸ್ತರ ಮಾತುಗಳನ್ನು ಸಂಪೂರ್ಣ ದಮನಿಸಲಾಗಿದೆ.

ಯಾವುದೇ ಎನ್‌ಕೌಂಟರ್‌ಗಳು ನಡೆದರೂ ಮ್ಯಾಜಿಸ್ಟೀರಿಯಲ್ ತನಿಖೆಯನ್ನು ನಡೆಸಲೇ ಬೇಕಾಗುತ್ತದೆ. ಅದೇನು ವಿಶೇಷ ತನಿಖೆಯಲ್ಲ. ಕಾನೂನಿನ ಪ್ರಕ್ರಿಯೆಯ ಭಾಗ ಮತ್ತು ಇಂತಹ ತನಿಖೆಯ ಬಹುತೇಕ ವರದಿಗಳು ಪೊಲೀಸರ ಮೂಗಿನ ನೇರಕ್ಕೆ ಬರುತ್ತವೆ. ಆದರೆ ಇಡೀ ಘಟನೆಯ ನ್ಯಾಯಾಂಗ ತನಿಖೆ ನಡೆದರೆ ಹಿಂಸಾಚಾರದ ಹಿಂದಿರುವ ಇನ್ನಿತರ ಕಾಣದ ಶಕ್ತಿಗಳನ್ನು ಹೊರಗೆ ತರಬಹುದು. ಒಂದು ವೇಳೆ ಪೊಲೀಸರ ಮೇಲೆ ಭಾರೀ ದೌರ್ಜನ್ಯ ನಡೆಸುವ ಸಂಚೊಂದು ಇತ್ತು ಎಂದಾದರೆ ಅದರ ಹಿಂದೆ ಯಾರಿದ್ದರು ಎನ್ನುವುದು ತನಿಖೆಗೆ ಒಳಗಾಗಬೇಡವೇ? ಬಿಜೆಪಿಯವರು ಹೇಳುವಂತೆ, ಹಿಂಸಾಚಾರದ ಹಿಂದೆ ಕಾಂಗ್ರೆಸ್‌ನ ಶಾಸಕರೊಬ್ಬರ ಕೈವಾಡವಿದೆ, ಅವರ ಹೇಳಿಕೆಯೇ ಹಿಂಸಾಚಾರಕ್ಕೆ ಪ್ರೇರಣೆ. ಹಾಗೆಂದಾದರೆ ಒಳ್ಳೆಯದೇ ಆಯಿತು. ತನಿಖೆಯಲ್ಲಿ ಕಾಂಗ್ರೆಸ್ ಶಾಸಕರ ಪಾತ್ರ ಸಾಬೀತಾದರೆ ಅವರನ್ನು ಜೈಲಿಗೆ ತಳ್ಳುವ ಅವಕಾಶ ಬಿಜೆಪಿ ಸರಕಾರಕ್ಕೆ ಸಿಕ್ಕಿದಂತಾಗುತ್ತದೆ. ಹೀಗಿದ್ದರೂ, ನ್ಯಾಯಾಂಗ ತನಿಖೆಗೆ ಒಪ್ಪಿಸಲು ಸರಕಾರ ಯಾಕೆ ಹಿಂಜರಿಯುತ್ತಿದೆ? ಪ್ರತಿಭಟನಾಕಾರರು ಪೊಲೀಸ್ ಠಾಣೆಯತ್ತ ಪೆಟ್ರೋಲ್ ಬಾಂಬ್ ತೂರಿದ್ದಾರೆ ಎಂದು ಅಧಿವೇಶನದಲ್ಲೇ ಬಸವರಾಜ ಬೊಮ್ಮಾಯಿ ಆರೋಪ ಮಾಡಿದ್ದಾರೆ. ಆದರೆ ಈ ಆರೋಪ, ಸ್ವತಃ ಆರೋಪಿ ಸ್ಥಾನದಲ್ಲಿರುವ ಪೊಲೀಸ್ ಇಲಾಖೆ ನೀಡಿರುವ ವರದಿಯ ಆಧಾರದಲ್ಲಿದೆ. ಇದೇ ಸಂದರ್ಭದಲ್ಲಿ ವಿವಿಧ ಮಾನವಹಕ್ಕು ಸಂಘಟನೆಗಳು ನೀಡಿರುವ ವರದಿಗಳು, ಪೊಲೀಸರ ತಪ್ಪುಗಳನ್ನು ಸ್ಪಷ್ಟವಾಗಿ ಹೇಳುತ್ತಿವೆ. ವಿವಿಧ ವೀಡಿಯೊಗಳು, ಪೊಲೀಸರು ‘ಕೊಲೆಗೈಯುವ’ ಸ್ಪಷ್ಟ ಉದ್ದೇಶದಿಂದಲೇ ಗುಂಡು ಹಾರಿಸುತ್ತಿರುವುದನ್ನು ಬಯಲು ಮಾಡಿದೆ.

‘ಒಬ್ಬನೇ ಒಬ್ಬ ಸತ್ತಿಲ್ಲವಲ್ಲ’ ಎಂಬ ಪೊಲೀಸ್ ಅಧಿಕಾರಿಯ ಹೇಳಿಕೆಯೂ ಇದನ್ನೇ ಪುಷ್ಟೀಕರಿಸುತ್ತದೆ. ಮತ್ತೊಂದು ಪ್ರಕರಣದಲ್ಲಿ ಮೇಲಧಿಕಾರಿಯ ಅನುಮತಿಯನ್ನು ಮೀರಿ ‘ಒಂದು ಬೀಳಲಿ ಸಾರ್’ ಎಂದು ಹೇಳುತ್ತಾ ಪೊಲೀಸ್ ಸಿಬ್ಬಂದಿ ಜನರೆಡೆಗೆ ನೇರವಾಗಿ ಗುಂಡು ಹಾರಿಸುತ್ತಿರುವ ದೃಶ್ಯಗಳನ್ನೂ ಜನರು ನೋಡಿದ್ದಾರೆ. ಇದೇ ಸಂದರ್ಭದಲ್ಲಿ ಪೊಲೀಸರು ಹೇಳುವಂತೆ ಸಾವಿರಾರು ಜನ ಪ್ರತಿಭಟನಾಕಾರರು ಅಲ್ಲಿ ಸೇರಿದ್ದರು, ಕೇರಳದಿಂದ ದುಷ್ಕರ್ಮಿಗಳು ಆಗಮಿಸಿದ್ದರು ಎನ್ನುವುದನ್ನೆಲ್ಲ ‘ವೀಡಿಯೊ ದೃಶ್ಯಗಳು’ ಸುಳ್ಳೆಂದು ಸಾರಿ ಸಾರಿ ಹೇಳುತ್ತಿವೆ. ಇದೊಂದು ಪೂರ್ವಯೋಚಿತ ಹಿಂಸಾಚಾರ ಎಂದು ಗೃಹ ಸಚಿವರು ಹೇಳಿರುವುದು ನೂರಕ್ಕೆ ನೂರು ನಿಜ. ಆದರೆ ಈ ಹಿಂಸಾಚಾರದ ಸಂಚು ರೂಪುಗೊಂಡಿರುವುದು ಜನಸಾಮಾನ್ಯರಿಂದಲೋ ಅಥವಾ ಪೊಲೀಸ್ ಇಲಾಖೆಯಿಂದಲೋ ಎನ್ನುವುದು ಸ್ಪಷ್ಟವಾಗಬೇಕಾಗಿದೆ. ಪೊಲೀಸರು ನೆರೆದ ನಾಲ್ಕುನೂರರಷ್ಟಿದ್ದ ಪ್ರತಿಭಟನಾಕಾರರನ್ನು ಪ್ರಚೋದಿಸಿದರು ಎನ್ನುವ ಆರೋಪಗಳಿವೆ.

ಬಸ್‌ಗಳಿಗಾಗಿ ಕಾಯುತ್ತಿದ್ದ ಪ್ರಯಾಣಿಕರು, ಶಾಲಾ ವಿದ್ಯಾರ್ಥಿಗಳ ಮೇಲೆ, ಮಹಿಳೆಯರ ಮೇಲೆ ಪೊಲೀಸರು ನಡೆಸುತ್ತಿದ್ದ ದೌರ್ಜನ್ಯಗಳ ಸಿಸಿಟಿವಿ ಫೂಟೇಜ್‌ಗಳು ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಬಟಾಬಯಲಾಗಿವೆ. ನಾಲ್ಕು ಘೋಷಣೆ ಕೂಗಿ ತೆರಳಲಿದ್ದ ಪ್ರತಿಭಟನಾಕಾರರ ಮೇಲೆ ಏಕಾಏಕಿ ಲಾಠಿ ಚಾರ್ಜ್ ಮಾಡಿ, ಅವರ ಮೇಲೆ ಭೀಕರ ದೌರ್ಜನ್ಯ ಎಸಗಿರುವ ಆರೋಪಗಳನ್ನು ನಿರಾಕರಿಸಲು ಪೊಲೀಸರಿಗೆ ಈವರೆಗೆ ಸಾಧ್ಯವಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನೂರಾರು ರೋಗಿಗಳಿರುವ ಆಸ್ಪತ್ರೆಯೊಂದಕ್ಕೆ ನುಗ್ಗಿ ಪೊಲೀಸರು ಎಸಗಿರುವ ಕ್ರೌರ್ಯ ಮಾನವೀಯತೆಯ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಹೀಗಿದ್ದರೂ ತನಿಖೆಯ ಅಗತ್ಯವಿಲ್ಲ ಎನ್ನುತ್ತಾರಾದರೆ ಸರಕಾರ ತನ್ನ ಆಪ್ತರನ್ನು ರಕ್ಷಿಸಲು ಯತ್ನಿಸುತ್ತಿದೆ ಎಂದೇ ಭಾವಿಸಬೇಕಾಗುತ್ತದೆ. ಗಂಭೀರ ತನಿಖೆಯ ಅಗತ್ಯವೇ ಇಲ್ಲ ಎಂದು ಹೇಳುವವರು ಪರೋಕ್ಷವಾಗಿ ಪೊಲೀಸರ ಕ್ರೌರ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಮಾತ್ರವಲ್ಲ, ಕಾನೂನು ಅವ್ಯವಸ್ಥೆಯಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳನ್ನು ಬೆಂಬಲಿಸಿ, ಮಂಗಳೂರಿನಲ್ಲಿ ಇನ್ನಷ್ಟು ಅನಾಹುತಗಳನ್ನು ಸೃಷ್ಟಿಸಲು ಕುಮ್ಮಕ್ಕು ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News