ಜಮ್ಮು-ಕಾಶ್ಮೀರ: ಇಬ್ಬರು ಲಷ್ಕರ್ ಉಗ್ರರ ಹತ್ಯೆ

Update: 2020-02-22 13:07 GMT

ಶ್ರೀನಗರ, ಫೆ.22: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರೆ ತೈಯಬ್ಬ(ಎಲ್‌ಇಟಿ) ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರು ಹತರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಮಧ್ಯರಾತ್ರಿಯ ಬಳಿಕ ಈ ಎನ್‌ಕೌಂಟರ್ ನಡೆಸಲಾಗಿದೆ.

ಅನಂತನಾಗ್ ಜಿಲ್ಲೆಯ ನೈನ ಗ್ರಾಮದಲ್ಲಿ ಭಯೋತ್ಪಾದಕರ ಚಲನವಲನದ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿವೆ. ಈ ಸಂದರ್ಭ ಉಗ್ರರು ಹಠಾತ್ತಾಗಿ ಗುಂಡಿನ ದಾಳಿ ಆರಂಭಿಸಿದ್ದಾರೆ. ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿದಾಗ ಇಬ್ಬರು ಉಗ್ರರು ಹತರಾಗಿದ್ದಾರೆ. ಮೃತರನ್ನು ನವೀದ್ ಭಟ್ ಮತ್ತು ಆಖಿಬ್ ಯಾಸೀನ್ ಭಟ್ ಎಂದು ಗುರುತಿಸಲಾಗಿದ್ದು ಇಬ್ಬರೂ ಎಲ್‌ಇಟಿಗೆ ಸೇರಿದವರು ಮತ್ತು ಹಲವು ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾಗಿದ್ದರು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್‌ಬಾಗ್ ಸಿಂಗ್ ಹೇಳಿದ್ದಾರೆ.

 ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷದಲ್ಲಿ ಇದುವರೆಗೆ ಭದ್ರತಾ ಪಡೆಗಳು ನಡೆಸಿದ 12 ಕಾರ್ಯಾಚರಣೆಯಲ್ಲಿ 25 ಉಗ್ರರನ್ನು ಹತ್ಯೆ ಮಾಡಲಾಗಿದೆ. ಅಲ್ಲದೆ ಭಯೋತ್ಪಾದಕರಿಗೆ ನೆರವು ನೀಡುತ್ತಿದ್ದ 40ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News