ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಕೊಲೆ: ಓರ್ವ ಆರೋಪಿ ಪೊಲೀಸರಿಗೆ ಶರಣು

Update: 2020-02-22 11:30 GMT
ಎಂ.ಎಲ್. ಸುರೇಶ- ನಾಗರಾಜು

ಪಾಂಡವಪುರ, ಫೆ.22: ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ತಾಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಗ್ರಾಮದ ಚಿಕ್ಕ ತಿಮ್ಮೇಗೌಡರ ಮಗ ಎಂ.ಎಲ್. ಸುರೇಶ(40) ಹಾಗೂ ಕೃಷ್ಣೇಗೌಡರ ಮಗ ನಾಗರಾಜು ಅಲಿಯಾಸ್ ನಾಗಯ್ಯ(38) ಕೊಲೆಯಾದವರು. 
ಕೃಷ್ಣ ಅಲಿಯಾಸ್ ರೌಡಿಕೃಷ್ಣ ಮತ್ತು ಕಪ್ಪೆ ಸುರೇಶ ಕೊಲೆ ಆರೋಪಿಗಳು. ಘಟನೆ ನಡೆದ ಕೂಡಲೇ ಕೃಷ್ಣ ಪೊಲೀಸರಿಗೆ ಶರಣಾಗಿದ್ದು, ಕಪ್ಪೆ ಸುರೇಶ ತಪ್ಪಿಸಿಕೊಂಡಿದ್ದಾನೆ.

ಕೊಲೆಯಾದ ಸುರೇಶ, ನಾಗಯ್ಯ ಮತ್ತು ಆರೋಪಿಗಳಾದ ಕೃಷ್ಣ ಮತ್ತು ಕಪ್ಪೆ ಸುರೇಶ ಹತ್ತಿರದ ಸಂಬಂಧಿಗಳಾಗಿದ್ದಾರೆ. ಮೈಸೂರಿನಲ್ಲಿ ಆಟೋ ಚಾಲಕ ಆಗಿರುವ ಎಂ.ಎಲ್.ಸುರೇಶ ಶಿವರಾತ್ರಿ ಹಬ್ಬಕ್ಕೆಂದು ಗ್ರಾಮಕ್ಕೆ ಬಂದಿದ್ದ.

ಘಟನೆಗೆ ಕಾರಣವಾದ ಪ್ರೇಮ
ಕೊಲೆ ಆರೋಪಿ ಕಪ್ಪೆ ಸುರೇಶನ ಅಣ್ಣನ ಮಗಳು ಮತ್ತು ಕೊಲೆಯಾದ ನಾಗಯ್ಯನ ಅಣ್ಣನ ಮಗ ಪರಸ್ಪರ ಪ್ರೀತಿಸುತ್ತಿದ್ದು, ಮೂರು ದಿನಗಳ ಹಿಂದೆ ಇಬ್ಬರೂ ಮನೆ ಬಿಟ್ಟು ಹೋಗಿದ್ದರು. ಆದಾಗ್ಯೂ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿರಲಿಲ್ಲ.

ಶುಕ್ರವಾರ ರಾತ್ರಿ ಕೊಲೆಯಾದ ಎಂ.ಎಲ್.ಸುರೇಶ, ಕೊಲೆ ಆರೋಪಿ ಕಪ್ಪೆ ಸುರೇಶನ ಅಣ್ಣನ ಮಗಳನ್ನು ಅವರ ಮನೆಯ ಬಳಿ ಭೇಟಿ ಮಾಡಿ ಓಡಿ ಹೋದ ಇಬ್ಬರು ಎಲ್ಲಿದ್ದಾರೆ ಎಂದು ವಿಚಾರಿಸಿದಾಗ ಯುವತಿ ಸರಿಯಾಗಿ ಉತ್ತರ ನೀಡಲಿಲ್ಲ ಎಂಬ ಕಾರಣಕ್ಕಾಗಿ ಎಂ.ಎಲ್. ಸುರೇಶ ಯುವತಿಗೆ ಹೊಡೆದನು ಎನ್ನಲಾಗಿದೆ. ಇದರಿಂದ ಕೋಪಗೊಂಡ ಯುವತಿ ಕೂಡಲೇ ಕಪ್ಪೆ ಸುರೇಶನಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾಳೆ. ತಕ್ಷಣ ಮಾರಕಾಸ್ತ್ರಗಳಿಂದ ಸಿದ್ದರಾಗಿ ಬಂದ ರೌಡಿ ಕೃಷ್ಣ ಮತ್ತು ಕಪ್ಪೆ ಸುರೇಶ, ಎಂ.ಎಲ್. ಸುರೇಶನನ್ನು ಮಾತನಾಡಲು ಕರೆಸಿಕೊಂಡರೆನ್ನಲಾಗಿದೆ. ಸುರೇಶ ತನ್ನ ಗೆಳೆಯ ನಾಗಯ್ಯನ ಜತೆ ಗ್ರಾಮದ ಮಹದೇಶ್ವರ ಸ್ವಾಮಿ ದೇವಾಲಯದ ಮುಂದೆ ಬರುತ್ತಿದ್ದಂತೆ ರೌಡಿ ಕೃಷ್ಣ ಮತ್ತು ಕಪ್ಪೆ ಸುರೇಶ ಅವರಿಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ ಎನ್ನಲಾಗಿದೆ.

ಕೂಡಲೇ ಗ್ರಾಮಸ್ಥರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಎಂ.ಎಲ್.ಸುರೇಶ ಮತ್ತು ನಾಗಯ್ಯ ಅವರನ್ನು ಪಾಂಡವಪುರ ಸರಕಾರಿ ಆಸ್ಪತ್ರೆಗೆ ಕರೆತಂದರಾದರೂ ಆವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

 ಈ ಸಂಬಂಧ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News