'ಮಹದಾಯಿ' ಅಧಿಸೂಚನೆ ಹೊರಡಿಸಲು ಕೋರಿ ಫೆ.26ಕ್ಕೆ ಹೊಸದಿಲ್ಲಿಗೆ: ಸಚಿವ ರಮೇಶ್ ಜಾರಕಿಹೊಳಿ

Update: 2020-02-22 12:01 GMT

ಬೆಳಗಾವಿ, ಫೆ. 22: ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ತಕ್ಷಣ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಮನವಿ ಮಾಡಲು ಫೆ.26ಕ್ಕೆ ಹೊಸದಿಲ್ಲಿಗೆ ತೆರಳಲಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ದಿಲ್ಲಿಗೆ ಕರೆದೊಯ್ಯಲು ಪ್ರಯತ್ನಿಸುತ್ತೇನೆ. ಮಹದಾಯಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರಕಾರ ಬದ್ಧವಾಗಿದೆ. ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಗೋವಾ ಕೋರ್ಟ್‌ಗೆ ಹೋಗಲಿ ಎಂದು ಹೇಳಿದರು.

ಮಹದಾಯಿ ಯೋಜನೆ ಅನುಷ್ಠಾನಕ್ಕೆ 200 ಕೋಟಿ ರೂ.ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಭರವಸೆ ನೀಡಿದ್ದಾರೆ. ಹಣ ಬಿಡುಗಡೆಯಾದ ತಕ್ಷಣ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಮಹದಾಯಿ ಉಗಮ ಸ್ಥಳವಾಗಿರುವ ಜಿಲ್ಲೆಯ ಖಾನಾಪುರದ ಕಣಕುಂಬಿಗೆ ಸದ್ಯದಲ್ಲಿಯೇ ನಾನು ಭೇಟಿ ನೀಡುತ್ತೇನೆ. ಕೃಷ್ಣಾ ಹಾಗೂ ಕಾವೇರಿ ನದಿ ನೀರು ಹಂಚಿಕೆ ಕುರಿತು ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ ಎಂದ ಅವರು, ನೀರಾವರಿ ಖಾತೆಯಲ್ಲಿ ಪಕ್ಷ, ಜಾತಿ ಬರಲ್ಲ. ನಮ್ಮ ಭಾಗಕ್ಕೆ ಅನುಕೂಲ ಆಗುವಂತೆ ಕೆಲಸ ಮಾಡುತ್ತೇನೆ ಎಂದರು.

ಸಮಸ್ಯೆ ಇಲ್ಲ: ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಗದೀಶ್ ಶೆಟ್ಟರ್ ನೇಮಕ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಉಸ್ತುವಾರಿ ಸಚಿವರಾಗಿ ಜಗದೀಶ್ ಶೆಟ್ಟರ್ ಇದ್ದರೆ ನಾನು ಇದ್ದ ಹಾಗೆಯೇ. ಅವರು ಒಳ್ಳೆಯವರು, ಅವರೇ ಇರಲಿ. ಅವರು ಆಗಲ್ಲ ಅಂದ ಮೇಲೆ ಉಸ್ತುವಾರಿ ಕೇಳುತ್ತೇನೆ ಎಂದರು.

‘ಜಲ ಸಂಪನ್ಮೂಲ ಇಲಾಖೆ ದೊಡ್ಡದಾಗಿದೆ. ತನ್ನ ಕೈಯಲ್ಲಿ ಇದನ್ನು ನಿಭಾಯಿಸಲು ಆಗುವುದಿಲ್ಲ ಎಂದು ನನ್ನ ವಿರೋಧಿಗಳು ಹೇಳುತ್ತಿದ್ದಾರೆ. ಆದರೆ, ನಾನು ಈ ಇಲಾಖೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ, ಉತ್ತಮ ರೀತಿಯಲ್ಲಿ ಕೆಲಸ ಮಾಡಿ ತೋರಿಸುತ್ತೇನೆ’

-ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News