ಯಡಿಯೂರಪ್ಪನವರೇ...ನಿಮ್ಮ ಸರಕಾರ ಬದುಕಿದೆಯಾ ?: ಟ್ವೀಟ್ ಮೂಲಕ ಕುಟುಕಿದ ಕಾಂಗ್ರೆಸ್

Update: 2020-02-22 12:11 GMT

ಬೆಂಗಳೂರು, ಫೆ. 22: ‘ಮುಖ್ಯಮಂತ್ರಿ ಯಡಿಯೂರಪ್ಪನವರೇ ನಿಮ್ಮ ಸರಕಾರ ಬದುಕಿದೆಯಾ? ಕಡತ ವಿಲೇವಾರಿ ವಿಳಂಬದ ಹಿಂದೆ ಭ್ರಷ್ಟಾಚಾರವಿದೆ. ಉದ್ದೇಶಪೂರ್ವಕವಾಗಿ ಕಡತಗಳನ್ನು ಸಚಿವಾಲಯಗಳಲ್ಲಿ ಉಳಿಸಿಕೊಳ್ಳಲಾಗಿದೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಶನಿವಾರ ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಅಭಿವೃದ್ಧಿ ಮಾಯವಾಗಿದೆ, ವರ್ಗಾವಣೆ ದಂಧೆ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದೆ. 41 ಇಲಾಖೆಗಳ 1.07 ಲಕ್ಷ ಕಡತಗಳು ವಿಲೇವಾರಿ ಆಗದೆ ಉಳಿದಿರುವುದೇಕೆ?’ ಎಂದು ಪ್ರಶ್ನಿಸಿದೆ.

‘ಆರು ತಿಂಗಳುಗಳಿಂದ ಬರಬೇಕಿರುವ ವಿವಿಧ ಯೋಜನೆಗಳ, ಅನುದಾನಗಳ ಮತ್ತು ಜಿಎಸ್ಟಿ ಹಣವನ್ನು ಕೊಡದ ಕೇಂದ್ರ ಸರಕಾರ ಹಾಗೂ ತರಲು ವಿಫಲವಾದ ಸರಕಾರ ಕರ್ನಾಟಕದ ಜನತೆಗೆ ಅನ್ಯಾಯ ಮಾಡುತ್ತಿವೆ. ಯಡಿಯೂರಪ್ಪನವರೆ, ರಾಜ್ಯವನ್ನು ಆರ್ಥಿಕವಾಗಿ ದುರ್ಬಲಗೊಳಿಸದಿರಿ. ಜೂಜು ಕೇಂದ್ರಗಳಿಂದ ಹಳ್ಳ ಹಿಡಿಯುತ್ತಿರುವ ಆರ್ಥಿಕತೆ ಸರಿ ಹೋಗುವುದೆ?’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

‘ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುವಂತೆ, ಪ್ರಧಾನಿ ಮೋದಿ ಅವರು ಟ್ರಂಪ್ ಅವರ ಭೇಟಿಯ ಸಮಯದಲ್ಲಿ ರೋಡ್ ಶೋಗೆ ಸುಮಾರು ಎಪ್ಪತ್ತು ಲಕ್ಷ ಜನರನ್ನು ಸೇರಿಸುವ ಭರವಸೆ ನೀಡಿದ್ದಾರಂತೆ. ಇದು ಸಾಧ್ಯವೇ? ಇದು ಅಗತ್ಯವೇ? ಜನತೆಯ ಹಣವನ್ನು ವ್ಯರ್ಥ ಮಾಡುವುದೇಕೆ?’ ಎಂದು ಕಾಂಗ್ರೆಸ್ ಪ್ರಧಾನಿಗೆ ಪ್ರಶ್ನೆ ಮಾಡಿದೆ.

‘ಈ ಕಾಲಗಣನೆಯನ್ನು ನೀವು ಅರ್ಥೈಸಿಕೊಳ್ಳಿರಿ, ಭರವಸೆಗಳನ್ನು ನೀಡಿರಿ, ಭರವಸೆಗಳನ್ನು ಮುರಿಯಿರಿ, ಭರವಸೆ ನೀಡಿದ್ದನ್ನು ಮರೆತುಬಿಡಿ’ ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಟ್ವಿಟ್ಟರ್ ಮೂಲಕ ಆಕ್ರೋಶವನ್ನು ಹೊರ ಹಾಕಿದೆ.

ಪ್ರಧಾನಿ ಮೋದಿ ಜುಮ್ಲಾ ಟ್ರ್ಯಾಕರ್: 2 ಕೋಟಿ ಉದ್ಯೋಗ, ಪ್ರತಿಯೊಬ್ಬರ ಖಾತೆಗೆ 15ಲಕ್ಷ ರೂ., 100 ಸ್ಮಾರ್ಟ್ ಸಿಟಿಗಳು, ಅಚ್ಚೇ ದಿನ್, ಟ್ರಂಪ್ ರೋಡ್ ಶೋಗೆ 70ಲಕ್ಷ ಜನ ಸೇರಿಸುವುದು (ಹೊಸ ಸೇರ್ಪಡೆ)

-ಕಾಂಗ್ರೆಸ್ ಟ್ವೀಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News