ಮಡಿಕೇರಿ: ಹುಲಿ ಹೆಜ್ಜೆ ಗುರುತು ಪತ್ತೆ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

Update: 2020-02-22 12:19 GMT

ಮಡಿಕೇರಿ, ಫೆ.22: ದಕ್ಷಿಣ ಕೊಡಗಿನ ವಿವಿಧೆಡೆ ಹುಲಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗುತ್ತಿರುವ ವಿಷಯ ಹಸಿರಾಗಿರುವಾಗಲೇ ಬಿಟ್ಟಂಗಾಲ ಸಮೀಪದ ವಿ.ಬಾಡಗದಲ್ಲಿ ಹುಲಿ ಹೆಜ್ಜೆ ಗುರುತು ಕಂಡು ಬಂದಿದೆ. ಇದರಿಂದ ವಿ.ಬಾಡಗದ ಆಸುಪಾಸಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ವಿ.ಬಾಡಗದ ವಗ್ಗೆ ಎಂಬಲ್ಲಿರುವ ಕುಪ್ಪಂಡ ದಿಲನ್ ಬೋಪಣ್ಣ ಅವರಿಗೆ ಸೇರಿದ ಕಾಫಿ ತೋಟದ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದೆ. ಇದರಿಂದ ಶುಕ್ರವಾರ ರಾತ್ರಿ ವೇಳೆ ಹುಲಿಯೊಂದು ಇತ್ತ ಸುಳಿದಾಡುವುದು ದೃಢಪಟ್ಟಿದೆ. ಇದು ಸಹಜವಾಗಿಯೇ ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದೆ. ಹೆಜ್ಜೆ ಗುರುತಿನ ಪ್ರಕಾರ ಭಾರೀ ಗಾತ್ರದ ಹುಲಿಯೊಂದು ಗ್ರಾಮದಲ್ಲಿ ಸಂಚರಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದೀಗ ಬೆಳೆಗಾರರ ಕಾಫಿ ಕೆಲಸ ಅಂತಿಮ ಹಂತದಲ್ಲಿದ್ದು, ಸ್ಪಿಂಕ್ಲರ್ ಕೆಲಸ ಈ ಭಾಗದಲ್ಲಿ ಭರದಿಂದ ನಡೆಯುತ್ತಿದೆ. ಈ ನಡುವೆ ಗ್ರಾಮದಲ್ಲಿ ಹುಲಿಯೊಂದು ಸಂಚರಿಸಿರುವುದು ಕಾಫಿ ತೋಟದ ಮಾಲಕರಲ್ಲಿ ಮತ್ತು ಕಾರ್ಮಿಕರಲ್ಲಿ ಆತಂಕ ಸೃಷ್ಟಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ವಿ.ಬಾಡಗ ಗ್ರಾಮಸ್ಥರು, ಇದೀಗ ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿರುವುದು ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಈ ಭಾಗದಲ್ಲಿ ಕಾರ್ಮಿಕರು ಮತ್ತು ಕೆಲವು ಶಾಲಾ ಮಕ್ಕಳು ದಿನನಿತ್ಯ ಬೆಳಗ್ಗೆ ಮತ್ತು ಸಂಜೆ ನಡೆದುಕೊಂಡು ಹೋಗುತ್ತಿರುತ್ತಾರೆ. ಇದರಿಂದಾಗಿ ಅರಣ್ಯ ಇಲಾಖೆ ವಿಶೇಷ ನಿಗಾ ವಹಿಸಿ ಗ್ರಾಮಸ್ಥರ ಆತಂಕವನ್ನು ದೂರ ಮಾಡಬೇಕು ಎಂದಿದ್ದಾರೆ.

ಒಮ್ಮೆ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡರೆ ಅದೇ ಹುಲಿ ಮತ್ತೆ ಈ ಭಾಗದಲ್ಲಿ ಸಂಚರಿಸುವ ಸಾಧ್ಯತೆಗಳು ಹೆಚ್ಚಿದೆ. ಇದೇ ಮೊದಲ ಬಾರಿಗೆ ಹುಲಿ ಸಂಚರಿಸಿದ ಸುದ್ಧಿ ಗ್ರಾಮದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಈ ಕಾರಣದಿಂದಾಗಿ ಕಾರ್ಮಿಕರು ಜೀವಭಯದಿಂದ ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.  ಇದರಿಂದ ಸ್ಪ್ರಿಂಕ್ಲರ್ ಕೆಲಸಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ. ಅಲ್ಲದೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತಿದೆ. ಇದೀಗ ವಿದ್ಯಾರ್ಥಿಗಳ ಪರೀಕ್ಷೆ ಸಮಯ ಹತ್ತಿರವಾಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅರಣ್ಯ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಾತ್ರಿ ಮತ್ತು ಹಗಲು ಸಮಯದಲ್ಲಿ ಗ್ರಾಮದಲ್ಲಿ ಗಸ್ತು ತಿರುಗಲು ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಅಲ್ಲದೆ ಬೋನನ್ನು ತಂದಿರಿಸಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿರುವ ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News