ಚಿಕ್ಕಮಗಳೂರು: ಅಮೂಲ್ಯ, ಆರ್ದ್ರಾ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಧರಣಿ

Update: 2020-02-22 12:27 GMT

ಚಿಕ್ಕಮಗಳೂರು, ಫೆ.22: ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಮತ್ತು ಆರ್ದ್ರಾ ನಾರಾಯಣ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಅವರಿಗೆ ಕುಮ್ಮಕ್ಕು ನೀಡಿದ ಸಂಘಟನೆಯವರನ್ನೂ ಬಂಧಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಶನಿವಾರ ಧರಣಿ ನಡೆಸಲಾಯಿತು.

ಶನಿವಾರ ನಗರದ ತಾಲೂಕು ಕಚೇರಿಯಿಂದ ಆಝಾದ್ ಪಾರ್ಕ್ ವೃತ್ತದವರೆಗೂ ಪ್ರತಿಭಟನೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಅಮೂಲ್ಯ ಹಾಗೂ ಆರ್ದ್ರಾ ನಾರಾಯಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಎಚ್.ಲೊಕೇಶ್ ಈ ವೇಳೆ ಮಾತನಾಡಿ, ಪಾಕಿಸ್ತಾನದ ಪರವಾಗಿ ಘೋಷಣೆಗಳನ್ನು ಕೂಗುವ ಗೀಳು ಇತ್ತೀಚೆಗೆ ದೇಶದಲ್ಲಿ ಹೆಚ್ಚಾಗುತ್ತಿದೆ. ಇಂತಹ ದೇಶದ್ರೋಹಿಗಳ ವಿರುದ್ಧ ರಾಜ್ಯ ಸರಕಾರ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ದೇಶ ವಿರೋಧಿ ಘೋಷಣೆ ಕೂಗುವವರಿಗೆ ಪ್ರಚೋದನೆ ನೀಡುತ್ತಿರುವ ಸಂಘಟನೆಗಳ ಮುಖಂಡರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ ಅವರು, ಸಿಎಎ ಮತ್ತು ಎನ್‍ಆರ್‍ಸಿ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡು ಗಲಭೆ ಸೃಷ್ಟಿಸಿ ಪ್ರಧಾನಿ ಮೋದಿಯವರಿಗೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶದಿಂದ ವಿರೋಧ ಪಕ್ಷಗಳು ಇಂತಹ ದೇಶ ವಿರೋಧಿ ಘೋಷಣೆ ಕೂಗುವವರಿಗೆ ಪ್ರಚೋದನೆ ನೀಡುತ್ತಿವೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಸಿಎಎ, ಎನ್‍ಆರ್‍ಸಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗಳಲ್ಲಿ ನಕ್ಸಲ್, ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಹೊರತುಪಡಿಸಿ ಬೇರೆ ಯಾರೂ ಇರುವುದಿಲ್ಲ. ಕಾಂಗ್ರೆಸ್, ಜೆಡಿಎಸ್ ಇಂತವರ ಬೆಂಬಲದಿಂದ ದೇಶ ವಿರೋಧಿಗಳು ಬೆಳೆಯುತ್ತಿದ್ದು, ಇನ್ನೂ ಮುಂದಾದರೂ ಈ ಪಕ್ಷಗಳು ಇಂತಹ ಮಾನಸಿಕತೆಯನ್ನು ತಿದ್ದಿಕೊಳ್ಳದಿದ್ದರೆ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್, ಜೆಡಿಎಸ್ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ಮುಖಂಡ ಎಚ್.ಡಿ.ತಮ್ಮಯ್ಯ ಮಾತನಾಡಿ, ಪ್ರಧಾನಿ ಮೋದಿಯವರ ಉತ್ತಮ ಕೆಲಸವನ್ನು ಸಹಿಸಿಕೊಳ್ಳಲು ಆಗದಿರುವವವರು ಸಿಎಎ ಕಾಯ್ದೆಯಿಂದ ಮುಸ್ಲಿಮರಿಗೆ ತೊಂದರೆಯಾಗುತ್ತದೆ ಎಂದು ಅವರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ ಹುಟ್ಟಿದ ಯಾವುದೇ ಮುಸ್ಲಿಮರಿಗೆ ಈ ಕಾಯ್ದೆಗಳಿಂದ ಕಿಂಚಿತ್ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಸರಕಾರವೇ ಅನೇಕ ಬಾರಿ ಹೇಳಿದರೂ ಭಯ ಹುಟ್ಟಿಸುವ ಕೆಲಸ ಮಾಡುವ ಸಂಚು ನಡೆಯುತ್ತಿದೆ. ರಾಜಕೀಯವಾಗಿ ಲಾಭ ಮಾಡಿಕೊಳ್ಳುವುದು ಈ ಸಂಚಿನ ದುರುದ್ದೇಶವಾಗಿದೆ. ಸಿಎಎ ವಿರುದ್ಧ ಒಂದು ವರ್ಗದ ಜನರನ್ನು ಎತ್ತಿಕಟ್ಟುವ ಕೆಲಸವನ್ನು ಕಾಣದ ಕೈಗಳು ಮಾಡುತ್ತಿದ್ದು, ದೇಶದ್ರೋಹಿ ಘೋಷಣೆ ಕೂಗುವ ಅಮೂಲ್ಯಳಂತವರ ಹಿಂದೆ ನಿಂತು ಬೆಂಬಲ ನೀಡುವವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಮತ್ತು ದೇಶದ್ರೋಹ ಘೋಷಣೆ ಕೂಗಿದ ಅಮೂಲ್ಯಳನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ನಗರ ಮಂಡಲದ ಅಧ್ಯಕ್ಷ ಮಧುರಾಜ್ ಅರಸ್ ಮಾತನಾಡಿದರು. ಧರಣಿಯಲ್ಲಿ ಬಿಜೆಪಿ ಮುಂಖಡರಾದ ಕೋಟೆ ರಂಗನಾಥ್, ದೀಪಕ್ ದೊಡ್ಡಯ್ಯ, ವರಸಿದ್ದಿ ವೇಣುಗೋಪಾಲ್, ಪ್ರೇಮ್ ಕುಮಾರ್, ಟಿ.ರಾಜಶೇಖರ್, ಜಿಲ್ಲಾ ಪಂಚಾಯತ್ ಸದಸ್ಯೆ ಜಸಿಂತಾ ಅನಿಲ್‍ ಕುಮಾರ್, ಮಾಜಿ ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News