ಜಮೀನಿನಲ್ಲಿ 'ವಿದ್ಯುತ್ ಸ್ಥಾವರ' ಆರೋಪ: ವಿಷದ ಬಾಟಲಿ ಪ್ರದರ್ಶಿಸಿ ಆತ್ಮಹತ್ಯೆಗೆ ಮುಂದಾದ ರೈತ ಮಹಿಳೆಯರು

Update: 2020-02-22 13:38 GMT

ವಿಜಯಪುರ, ಫೆ.22: ಸರಕಾರ ವಿದ್ಯುತ್ ಸ್ಥಾವರ ನಿರ್ಮಾಣವನ್ನು ತಮ್ಮ ಜಮೀನಿನಲ್ಲಿ ಮಾಡುತ್ತಿರುವುದನ್ನು ವಿರೋಧಿಸಿ ನಾಲವಾಡ ಬಳಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ರೈತ ಮಹಿಳೆಯರು ಆತ್ಮಹತ್ಯೆಗೆ ಮುಂದಾಗಿ ವಿಷದ ಬಾಟಲಿ ಪ್ರದರ್ಶಿಸಿರುವ ಘಟನೆ ಜರುಗಿದೆ.

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪೀರಾಪುರ-ಬೂದಿಹಾಳ ಏತ ನೀರಾವರಿ ಯೋಜನೆಗಾಗಿ ಸರಕಾರ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಮುಂದಾಗಿರುವ ಜಮೀನು ತಮಗೆ ಸೇರಿದ್ದು, ಆದರೆ ಸರಕಾರ ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸ್ಥಾವರ ನಿರ್ಮಿಸುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

ಶುಕ್ರವಾರ ಸರಕಾರ ತಕ್ಷಣ ಸ್ಥಾವರ ನಿರ್ಮಾಣ ಸ್ಥಗಿತಗೊಳಿಸದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದರು. ಆದರೆ, ಸರಕಾರ ಸ್ಪಂದಿಸದ ಕಾರಣ ಶನಿವಾರ ರೈತರು ವಿಷದ ಬಾಟಲಿ ಸಮೇತ ನಾಲತವಾಡ ಬಳಿಯ ಧರಣಿ ಸ್ಥಳಕ್ಕೆ ಬಂದಿದ್ದರು. ಇದರಲ್ಲಿ ಓರ್ವ ರೈತ ಮಹಿಳೆ ವಿಷ ಸೇವನೆಗೆ ಯತ್ನಿಸುತ್ತಲೇ ಸ್ಥಳದಲ್ಲಿದ್ದ ಪೊಲೀಸರು ವಿಷದ ಬಾಟಲಿ ಕಸಿದುಕೊಂಡಿದ್ದಾರೆ.

ನಂತರ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಕೆಬಿಜೆಎನ್‌ಎಲ್ ಅಧಿಕಾರಿಗಳ ಸಮ್ಮುಖದಲ್ಲಿ ರೈತರೊಂದಿಗೆ ಚರ್ಚೆ ನಡೆಸಿದರು.

ಅಂತಿಮವಾಗಿ ರೈತರು ತಮ್ಮ ಜಮೀನು ಎನ್ನುವ ಕುರಿತು 15 ದಿನಗಳಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ಅಥವಾ ಆದೇಶ ತರಬೇಕು. 15 ದಿನಗಳಲ್ಲಿ ನ್ಯಾಯಾಲಯದ ಆದೇಶ ತರದಿದ್ದಲ್ಲಿ ಕಾಮಗಾರಿ ಮುಂದುವರೆಸುವುದಾಗಿ ಅಧಿಕಾರಿಗಳು ರೈತರಿಗೆ ಗಡುವು ನೀಡಿದರು. ಇದಕ್ಕೆ ಒಪ್ಪಿದ ರೈತರು ಧರಣಿ ಕೈಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News