ಬಾಲ್ಯ ವಿವಾಹ ಪ್ರಕರಣ: ಬಾಲಕಿಯ ತಾಯಿ, ಮದುಮಗ ಸೇರಿ ಐವರ ವಿರುದ್ಧ ಎಫ್ಐಆರ್

Update: 2020-02-22 16:14 GMT

ಚಾಮರಾಜನಗರ, ಫೆ.22: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿಯಲ್ಲಿ ನಡೆಯಲಾದ ಅಪ್ರಾಪ್ತ ಬಾಲಕಿಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕಳೆದ ಫೆಬ್ರವರಿ 19 ರಂದು ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ 24 ವರ್ಷದ ಮಾದಪ್ಪ ಎಂಬವರು ಮದುವೆಯಾಗಿರುವ ಬಗ್ಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳೀಯ ಮುಖಂಡರು, ಅಂಗನವಾಡಿ ಕಾರ್ಯಕರ್ತೆಯರು ಇತರರೊಂದಿಗೆ ಬಾಲಕಿಯ ಮನೆಗೆ ಹಾಗೂ ಮದುವೆಯಾದ ಹುಡುಗನ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಹುಡುಗ ಮತ್ತು ಬಾಲಕಿಯ ಪೋಷಕರು ಯಾರು ಸಹ ಇರಲಿಲ್ಲ, ಮದುವೆ ಮುಗಿದ ಬಳಿಕ ಗ್ರಾಮದಿಂದ ಸ್ಥಳಾಂತರಗೊಂಡಿರುವ ಬಗ್ಗೆ ತಿಳಿದು ಬಂದಿದೆ. ಅಪ್ರಾಪ್ತ ಬಾಲಕಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಗೆ ಗೈರು ಹಾಜರಾಗಿರುವುದಾಗಿ ತಿಳಿದುಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು ಅವರು ಇಲಾಖೆಯ ಇತರೆ ಅಧಿಕಾರಿಗಳಾದ ಚೆಲುವರಾಜು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿಜಯ್ ಭೇಟಿ ನೀಡಿ ಮಾಹಿತಿ ಪಡೆದು ಕೊಂಡಿದ್ದಾರೆ.

ಬಾಲಕಿಯ ತಾಯಿ ದೊಡ್ಡಮ್ಮ, ವಿವಾಹವಾಗಿರುವ ಮಾದಪ್ಪ, ಹುಡುಗನ ತಂದೆ ಜವರಶೆಟ್ಟಿ, ತಾಯಿ ಮಹದೇವಮ್ಮ ಮದುವೆ ಮಾಡಲು ನೆರವಾದ ಅರ್ಚಕರಾದ ಮಹದೇವಶೆಟ್ಟಿ ವಿರುದ್ಧ ದೂರು ನೀಡಲಾಗಿದ್ದು, ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News