ಪಾಕಿಸ್ತಾನ ಝಿಂದಾಬಾದ್ ಘೋಷಣೆ: ಅಮೂಲ್ಯ ಗಡಿಪಾರಿಗೆ ಒತ್ತಾಯಿಸಿ ಮೈಸೂರಿನಲ್ಲಿ ಧರಣಿ

Update: 2020-02-22 16:35 GMT

ಮೈಸೂರು,ಫೆ.22: ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಿಎಎ ವಿರೋಧಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯಳನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಲಾಯಿತು.

ನಗರದಗನ್‍ ಹೌಸ್‍ ವೃತ್ತದಲ್ಲಿ ಶನಿವಾರ ಸಮಾವೇಶಗೊಂಡ ಪ್ರತಿಭಟನಾಕಾರರು ಮಾತನಾಡಿ, ಮೊದಲು ಈ ರೀತಿಯ ವೇದಿಕೆಗಳನ್ನು ಸೃಷ್ಟಿಸಿ, ದೇಶ ವಿರೋಧಿ ಘೋಷಣೆಗಳನ್ನು ಕೂಗುವ ದೇಶದ್ರೋಹಿಗಳನ್ನು, ಈ ಕಾರ್ಯಕ್ರಮವನ್ನು ಆಯೋಜಿಸಿರುವ ಪ್ರತಿಯೊಬ್ಬರನ್ನೂ ವಿಚಾರಣೆಗೊಳಪಡಿಸಿ, ಕಠಿಣ ಶಿಕ್ಷೆ ನೀಡಬೇಕು. ನಮ್ಮ ದೇಶದ ಅನ್ನ ತಿಂದು ದೇಶ ವಿರೋಧಿ ಘೋಷಣೆ ಕೂಗುವುದು ನಿಜಕ್ಕೂ ಖಂಡನೀಯ. ಅಂತಹ  ಸಂಘಟನೆಗಳನ್ನು ಸರ್ಕಾರ ಮಟ್ಟಹಾಕಬೇಕು. ಈ ರೀತಿಯ ಪ್ರತಿಭಟನೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದರು. ಇಂತಹವರನ್ನು ಕೂಡಲೇ ಗಡಿಪಾರು ಮಾಡಬೇಕು. ಇಂತಹ ದೇಶದ್ರೋಹಿಗಳಿಗೆ ಕ್ಷಮೆ ಇರಬಾರದು. ಯಾವ ವಕೀಲರೂ ಇವರ ಪರವಾಗಿ ವಕಾಲತ್ತು ವಹಿಸಬಾರದು. ಇವರ ಪರವಾಗಿ ವಕಾಲತ್ತು ವಹಿಸುವವರಿಗೂ ಕ್ಷಮೆ ಇರಬಾರದು ಎಂದರು.

ಕೇವಲ 19 ವರ್ಷದ ಅಮೂಲ್ಯ ಎಂಬ ಯುವತಿ ಪಾಕಿಸ್ತಾನ ಝಿಂದಾಬಾದ್ ಎಂದು ಹೇಳುವಾಗ ನಮ್ಮ ರಕ್ತ ಕುದಿಯುತ್ತದೆ. ಇಂತಹ ಆಲೋಚನೆ ಅವಳಿಗೆ  ಬಂದಿದ್ದಾದರೂ ಹೇಗೆ, ಅವಳ ಹಿಂದೆ ಯಾರಿದ್ದಾರೆ ? ಅವಳು ಯಾರಿಂದ ತರಬೇತಿ ಪಡೆದಿದ್ದಾಳೆ ಈ ರೀತಿ ಮಾತನಾಡಲು? ಯಾವ ಸಂಘಟನೆಯ ಹಿನ್ನೆಲೆಯಿಂದ ಬಂದಿದ್ದಾಳೆ ? ಇವುಗಳೆಲ್ಲದರ ಬಗ್ಗೆ ಸಿಬಿಐಯಿಂದ ಸಮಗ್ರ ತನಿಖೆ ಆಗಬೇಕು. ನಮ್ಮ ದೇಶದ ಶಾಂತಿ ಸುವ್ಯವಸ್ಥೆ ಕದಡುವ ಕಾಣದ ಕೈಗಳನ್ನು ಸೆರೆ ಹಿಡಿದು ಮತ್ತೆ ಈ ರೀತಿ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಂಡು ಮತ್ತೆ ಅಮೂಲ್ಯಳಂತ ವಿಷಜಂತುಗಳು ದೇಶ ವಿರೋಧಿ ಘೋಷಣೆಗಳನ್ನು ಕೂಗದಂತೆ ಈ ಕೂಡಲೇ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕುಎಂದು ಹೇಳಿದರು.

ಇಂತಹವರನ್ನು ಕೇವಲ ಬಂಧನ, ವಿಚಾರಣೆ ಮತ್ತು 1 ಲಕ್ಷದ ಬಾಂಡ್ ಒಪ್ಪಿಗೆ ಪತ್ರ ಅಷ್ಟನ್ನೇ ತೆಗೆದುಕೊಂಡರೆ ಸಾಲದು, ಇವರ ಮೇಲೆ ಸರ್ಕಾರ ಈ ಕೂಡಲೇ ಕಠಿಣ ಕ್ರಮ ಜರುಗಿಸಿ, ಯಾವುದೇ ಸಭೆ ಸಮಾರಂಭ ಗಳಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡದಂತೆ ಆದೇಶಿಸಿ ಸರ್ಕಾರ ಈ ಕೂಡಲೇ  ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ  ದೇಶದ ಜನತೆ ಉಗ್ರ ಹೋರಾಟವನ್ನು ನಡೆಸಲಿದ್ದಾರೆ ಎಂದು ತಿಳಿಸಿ ಮುಖ್ಯಮಂತ್ರಿಗಳಿಗೆ, ಜಿಲ್ಲಾಧಿಕಾರಿಗಳ ಮುಖಾಂತರ ಈ ಮನವಿಯನ್ನು ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಡಾ.ಶಾಂತರಾಜೇ ಅರಸ್, ಪಿ.ವಿಕ್ರಂ ಅಯ್ಯಂಗಾರ್, ರಾಕೇಶ್ ಭಟ್, ಸುಚೀಂದ್ರ,  ಶಾಂತಮೂರ್ತಿ, ವಿಜಯೇಂದ್ರ, ಪ್ರಜೀಶ್.ಪಿ, ಅಕ್ಷಯ್, ಪ್ರಭುಶಂಕರ್ ಎಂ.ಬಿ, ರಾಜೇಶ್.ಪಿ, ಮೊಗಣ್ಣಾಚಾರ್, ಬಂಗಾರಪ್ಪ, ಜ್ಯೋತಿ, ಪರಿಸರ ಚಂದ್ರು, ಗುರುಮಲ್ಲಪ್ಪ, ನಂಜುಂಡಸ್ವಾಮಿ, ನಂದಕುಮಾರ್, ದರ್ಶನ್ ಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News