ಪೇದೆ ಮೇಲೆ ಹಲ್ಲೆ ಪ್ರಕರಣ: ಚಿಕಿತ್ಸೆಗೆ ನಟನ ನಗದು ಬೇಡ ಎಂದ ಪೊಲೀಸರು

Update: 2020-02-22 16:41 GMT

ಬೆಂಗಳೂರು, ಫೆ.22: ಸಿನಿಮಾ ನಟ ದರ್ಶನ್ ಜನ್ಮ ದಿನದ ಕಾರ್ಯಕ್ರಮದ ವೇಳೆ ಇಲ್ಲಿನ ಜ್ಞಾನಭಾರತಿ ಠಾಣೆ ಪೇದೆ ಡಿ.ಆರ್.ದೇವರಾಜ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಚಿಕಿತ್ಸೆಗಾಗಿ ದರ್ಶನ್ ಪರವಾಗಿ ವ್ಯವಸ್ಥಾಪಕ ನೀಡಲು ಮುಂದಾಗಿದ್ದ ಹಣವನ್ನು ಪೊಲೀಸರು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.

ಫೆ.15ರಂದು ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ ಲೇಔಟ್‌ನಲ್ಲಿ ನಟ ದರ್ಶನ್ ಹುಟ್ಟುಹಬ್ಬ ಆಚರಣೆ ಮಾಡಲಾಗಿತ್ತು. ಈ ವೇಳೆ, ಯುವಕನೋರ್ವ ಪೇದೆ ದೇವರಾಜ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಇನ್ನು ಘಟನೆಯಲ್ಲಿ ಗಾಯಗೊಂಡ ದೇವರಾಜ್ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆದರೆ, ಈ ಮಧ್ಯೆ ದೂರವಾಣಿ ಮೂಲಕ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದ್ದ ದರ್ಶನ್ ಅವರ ವ್ಯವಸ್ಥಾಪಕ, ಚಿಕಿತ್ಸಾ ವೆಚ್ಚಕ್ಕಾಗಿ 2 ಲಕ್ಷ ನೀಡುವುದಾಗಿ ಹೇಳಿದ್ದರು. ಆತನನ್ನು ತರಾಟೆಗೆ ತೆಗೆದುಕೊಂಡ ಅಧಿಕಾರಿ, ನಿಮ್ಮ ಬೇಜವಾಬ್ದಾರಿಯಿಂದಲೇ ಈ ಘಟನೆ ನಡೆದಿದೆ. ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದ್ದಾರೆ.

ಪೇದೆ ಮೇಲೆ ಗಂಭೀರ ಹಲ್ಲೆ ನಡೆದಿದೆ. ಆದರೆ, ಚಿಕಿತ್ಸೆಗಾಗಿ ಹಣದ ಕೊರೆತೆ ಇಲ್ಲ. ಇನ್ನು, ಯಾರ ಕಡೆಯಿಂದಲೂ ಹಣದ ಅವಶ್ಯಕತೆ ಇಲ್ಲ.

-ಬಿ.ರಮೇಶ್, ಪಶ್ಚಿಮ ವಿಭಾಗದ ಡಿಸಿಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News