ಪತ್ನಿಯ ಕೊಲೆ ಆರೋಪಿ ವೈದ್ಯ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ: ಪ್ರಿಯತಮೆ ಬೆಂಗಳೂರಿನಲ್ಲಿ ನೇಣಿಗೆ ಶರಣು

Update: 2020-02-23 09:19 GMT
ಡಾ.ರೇವಂತ್ ಮತ್ತು ಕವಿತಾ ದಂಪತಿ

ಚಿಕ್ಕಮಗಳೂರು, ಫೆ.23: ಕಡೂರಿನಲ್ಲಿ ಕಳೆದ ವಾರ ನಡೆದ ಗೃಹಿಣಿ ಕವಿತಾ ಎಂಬವರ ಹತ್ಯೆ ಪ್ರಕರಣ ತಿರುವು ಪಡೆಯುತ್ತಿದ್ದು, ಆಕೆಯ ಪತಿ ವೈದ್ಯ ಡಾ.ರೇವಂತ್ ಶನಿವಾರ ಬಂಡಿಕೊಪ್ಪಲು ರೈಲ್ವೆ ಗೇಟ್ ಸಮೀಪ ರೈಲಿನಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನಡುವೆ ರೇವಂತ್ ಪ್ರಿಯತಮೆ ಎನ್ನಲಾದ ಹರ್ಷಿತಾ(32) ಎಂಬ ಗೃಹಿಣಿ ಬೆಂಗಳೂರಿನ ರಾಜಾರಾಜೇಶ್ವರಿ ನಗರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ನಡೆದಿದೆ.

ಕವಿತಾರನ್ನು ಫೆ.17ರಂದು ಕತ್ತು ಸೀಳಿ ಕೊಲೆಗೈಯಲಾಗಿತ್ತು. ಈ ಬಗ್ಗೆ ದಂತ ವೈದ್ಯನಾಗಿದ್ದ ಡಾ.ರೇವಂತ್, ತನ್ನ ಪತ್ನಿಯನ್ನು ದರೋಡೆಕೋರರು ಕೊಲೆಗೈದು ಚಿನ್ನಾಭರಣ ದೋಚಿದ್ದಾರೆ ಎಂದು ಪೊಲೀಸ್ ದೂರು ನೀಡಿದ್ದರು. ಆದರೆ ಈ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ರೇವಂತ್ ಬಗ್ಗೆಯೇ ಶಂಕೆ ವ್ಯಕ್ತವಾಗಿತ್ತೆನ್ನಲಾಗಿದೆ. ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಕೊಲೆ ಆರೋಪಿ ಡಾ.ರೇವಂತ್ ಶನಿವಾರ ರೈಲಿನಡಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ. ಇದರ ಬೆನ್ನಲ್ಲೇ ರೇವಂತ್ ಪ್ರಿಯತಮೆ ಎನ್ನಲಾದ ಹರ್ಷಿತಾ(32) ಬೆಂಗಳೂರಿನ ರಾಜರಾಜೇಶ್ವರಿ ನಗರದ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

  ಮೂಲತಃ ತುಮಕೂರು ನಿವಾಸಿಯಾಗಿದ್ದ ಹರ್ಷಿತಾರಿಗೆ ಬಿಎಂಟಿಸಿ ಬಸ್ ಚಾಲಕ ಸುಧೀಂದ್ರ ಎಂಬವರೊಂದಿಗೆ ವಿವಾಹವಾಗಿದ್ದು, ಓರ್ವ ಪುತ್ರಿಯಿದ್ದಾಳೆ. ಹಿಂದೆ ಕಡೂರಿನಲ್ಲಿ ನೆಲೆಸಿದ್ದ ಇವರು ಬಳಿಕ ಬೆಂಗಳೂರಿಗೆ ತೆರಳಿ ಅಲ್ಲಿ ವಾಸವಾಗಿದ್ದರು. ಇದೊಂದು ಅಕ್ರಮ ಸಂಬಂಧ ಪ್ರಕರಣದಿಂದ ಆಗಿರುವ ಅನಾಹುತ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಡಾ.ರೇವಂತ್ ಮತ್ತು ಹರ್ಷಿತಾ ಅಕ್ರಮ ಸಂಬಂಧ ಹೊಂದಿದ್ದರೆನ್ನಲಾಗಿದೆ. ಈ ವಿಚಾರವಾಗಿ ಡಾ.ರೇವಂತ್ ಮತ್ತು ಕವಿತಾ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿತ್ತೆನ್ನಲಾಗಿದೆ. ಫೆ.17ರಂದು ಈ ವಿಚಾರವಾಗಿ ನಡೆದ ಜಗಳದ ವೇಳೆ ಕವಿತಾರನ್ನು ಡಾ.ರೇವಂತ್ ಕತ್ತು ಸೀಳಿ ಕೊಲೆ ಮಾಡಿದ್ದನೆನ್ನಲಾಗಿದೆ. ಪ್ರಕರಣದ ತನಿಖೆ ತೀವ್ರಗೊಳಿಸಿದ ಪೊಲೀಸರಿಗೆ ರೇವಂತ್ ಬಗ್ಗೆ ಶಂಕೆ ಮೂಡುತ್ತಲೇ ಬೆದರಿದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ರೇವಂತೆ ಆತ್ಮಹತ್ಯೆ ಸುದ್ದಿ ತಿಳಿದು ಹರ್ಷಿತಾ ಕೂಡಾ ಆತ್ಮಹತ್ಯೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಅಕ್ರಮ ಸಂಬಂಧದ ಸುಳಿಗೆ ಸಿಲುಕಿದ ಎರಡು ಕುಟುಂಬಗಳು ನಾಶಗೊಂಡಿದ್ದು, ಮೂವರು ಜೀವ ಕಳೆದುಕೊಂಡಿದ್ದರೆ, ಮೂವರು ಮಕ್ಕಳು ಅನಾಥರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News