ಫೆ.24ರಂದು ವಿಜಯಪುರದಲ್ಲಿ ಬೃಹತ್ 'ಸಂವಿಧಾನ ಉಳಿಸಿ ಜನಾಂದೋಲನ'

Update: 2020-02-23 11:57 GMT

ವಿಜಯಪುರ, ಫೆ.23: ಭಾರತೀಯ ಸಂವಿಧಾನದ ಆಶಯಗಳ ರಕ್ಷಣೆಗಾಗಿ ಬಿಜಾಪೂರ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಫೆ.24ರಂದು ಅಪರಾಹ್ನ 3ಕ್ಕೆ ಕೊಲ್ಹಾರ ರಸ್ತೆಯ ಜುಮ್ನಾಳ ಕ್ರಾಸ್ ಬಳಿ `ಭಾರತೀಯ ಸಂವಿಧಾನ ಉಳಿಸಿ ಜನಾಂದೋಲನ ಆಯೋಜಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಲ್ಪಸಂಖ್ಯಾತ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಈಗಾಗಲೇ ಬೃಹತ್ ಜನಾಂದೋಲನಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ಸುಮಾರು 12 ಎಕರೆ ವಿಶಾಲ ಪ್ರದೇಶದಲ್ಲಿ ಈ ಆಂದೋಲನ ನಡೆಯಲಿದೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಿಂದ ಜನತೆ ಈ ಆಂದೋಲನದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಅಲ್ಪಸಂಖ್ಯಾತ ಮುಖಂಡ ಮುಹಮ್ಮದ್ ‍ರಫೀಕ್ ಟಪಾಲ್ ಮಾತನಾಡಿ, ಆಂದೋಲನ ಸಂದರ್ಭದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಜನರಿಗೂ ಸ್ಪಷ್ಟವಾಗಿ ಕಾರ್ಯಕ್ರಮ ಕಾಣಿಸುವಂತೆ ವ್ಯವಸ್ಥಿತ ರೀತಿಯಲ್ಲಿ ವೇದಿಕೆ ಸಜ್ಜುಗೊಳಿಸಲಾಗುತ್ತಿದ್ದು, ಅದರ ಜೊತೆಗೆ 80x12 ಅಳತೆಯ ಬೃಹತ್ ಎಲ್‍ಇಡಿ ಪರದೆ ಸೇರಿದಂತೆ 16x12 ಅಳತೆಯ ಅನೇಕ ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ. ಈ ಬೃಹತ್ ಜನಾಂದೋಲನ ಸಭೆಯಲ್ಲಿ ರಾಷ್ಟ್ರದ ಅನೇಕ ಮಠಾಧೀಶರು, ಹಿರಿಯ ರಾಜಕೀಯ ನೇತಾರರು, ಹೋರಾಟಗಾರರು, ಚಿಂತಕರು ಭಾಗವಹಿಸಿ ತಮ್ಮ ವಿಚಾರ ಮಂಡನೆ ಮಾಡಲಿದ್ದಾರೆ ಎಂದರು.

ಮುಸ್ಲಿಂ ಧರ್ಮಗುರು ಹಝ್ರತ್ ಸೈಯದ್ ತನ್ವೀರ್ ಪೀರ್ ಆಂದೋಲನದ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಕೇಂದ್ರದ ಮಾಜಿ ಸಚಿವರಾದ ಯಶವಂತ್ ಸಿನ್ಹಾ, ಶತ್ರುಘ್ನ ಸಿನ್ಹಾ, ಮಲ್ಲಿಕಾರ್ಜುನ ಖರ್ಗೆ, ಸಿಪಿಐ ರಾಷ್ಟ್ರೀಯ ಮುಖಂಡ ಸೀತಾರಾಮ ಯೆಚೂರಿ, ಹಿರಿಯ ನ್ಯಾಯವಾದಿ ಭಾನುಪ್ರತಾಪ್ ಸಿಂಗ್, ವಿಶ್ರಾಂತ ಐಎಎಸ್ ಅಧಿಕಾರಿ ಸೈಯದ್ ಝಮೀರ್ ಪಾಷಾ, ಸುಪ್ರೀಂ ಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲ ಗೌಡ, ಭೀಮ್ ಆರ್ಮಿ ಸಂಸ್ಥಾಪಕ ಮುಖ್ಯಸ್ಥ ಚಂದ್ರಶೇಖರ ಆಝಾದ್, ಹಿರಿಯ ಚಿಂತಕ ಡಾ.ರಾಮ್, ಹೋರಾಟಗಾರ ಸಸಿಕಾಂತ ಸೆಂಥಿಲ್, ಪ್ರೊ.ಸುಷ್ಮಾ ಅಂಧಾರೆ, ಸಾಮಾಜಿಕ ಹೋರಾಟಗಾರ ಉಸ್ಮಾನ್ ಶರೀಫ್ ಭಾಗವಹಿಸಿ ಮಾತನಾಡಲಿದ್ದಾರೆ.

ನವದೆಹಲಿಯ ಉಲಮಾ-ಹಿಂದ್‍ನ ಕಾರ್ಯದರ್ಶಿ ಮೌಲಾನಾ ಮಹಮೂದ್ ಮದನಿ, ಖ್ಯಾತ ಚಿಂತಕ ಸ್ವಾಮಿ ಅಗ್ನಿವೇಶ, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿ, ಹುಬ್ಬಳ್ಳಿಯ ಸೈಯದ್ ತಾಜುದ್ದೀನ್ ಖಾದ್ರಿ, ಬೆಂಗಳೂರು ಮೌಲಾನಾ ಶಬ್ಬೀರ ನದ್ವಿ ಸೇರಿದಂತೆ ಅನೇಕ ಚಿಂತಕರು, ಮಠಾಧೀಶರು ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಮುಖಂಡರಾದ ಅಬ್ದುರ್ರಝಾಕ್ ಹೊರ್ತಿ, ದಲಿತ ಮುಖಂಡರಾದ ಅಡಿವೆಪ್ಪ ಸಾಲಗಲ್ಲ, ಶ್ರೀನಾಥ ಪೂಜಾರಿ, ರೈತ ಮುಖಂಡ ಭೀಮಶಿ ಕಲಾದಗಿ, ಪ್ರಭುಗೌಡ ಪಾಟೀಲ, ಮುಹಿನುದ್ದೀನ್ ಬೀಳಗಿ, ಫಯಾಝ್ ಕಲಾದಗಿ, ಇರ್ಫಾನ್ ಶೇಖ್, ಇದ್ರೂಸ್ ಭಕ್ಷಿ, ದಸ್ತಗೀರ ಸಾಲೋಟಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News