ಸಿ.ಟಿ ರವಿ ಮನೆ ಮುಂದೆ ಅನಿರ್ಧಿಷ್ಟಾವಧಿ ಇಸ್ಪೀಟ್ ಆಡಿ ಪ್ರತಿಭಟನೆ !

Update: 2020-02-23 13:19 GMT

ಬೆಂಗಳೂರು, ಫೆ. 23: ಪ್ರವಾಸೋದ್ಯಮ ಉತ್ತೇಜನಕ್ಕೆ ಖಾಸಗಿ ಹೂಡಿಕೆದಾರರಿಗೆ ಕ್ಯಾಸಿನೋ(ಜೂಜಾಟ)ಗೆ ಅನುಮತಿ ನೀಡಲು ಮುಂದಾಗಿರುವ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕ್ರಮ ಖಂಡಿಸಿ, ಕರ್ನಾಟಕ ಕಿಸಾನ್ ಕಾಂಗ್ರೆಸ್ ಸಚಿವರ ನಿವಾಸದ ಮುಂದೆ ಅನಿರ್ದಿಷ್ಟಾವಧಿ ಇಸ್ವೀಟ್ ಆಡುವ ಮೂಲಕ ಪ್ರತಿಭಟನೆಗೆ ಮುಂದಾಗಿದೆ.

ರಾಜ್ಯದ ಹಲವು ಜಿಲ್ಲೆಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಪ್ರವಾಹ ಉತ್ತರ ಕರ್ನಾಟಕದ ಜನರ ಜೀವನವನ್ನೇ ಕಸಿದುಕೊಂಡಿದೆ. ರಾಜ್ಯದಲ್ಲಿ ರೈತರು ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸಚಿವರ ತವರು ಜಿಲ್ಲೆಯಲ್ಲಿಯೇ ಜನರ ಬದುಕು ಬೀದಿಗೆ ಬಂದಿದೆ. ಇದರ ಬಗ್ಗೆ ಚಿಂತಿಸದೇ ಕ್ಯಾಸಿನೋ ಬಗ್ಗೆ ಚಿಂತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಟೀಕಿಸಿದ್ದಾರೆ.

ಬೇಸಿಗೆಯ ಪ್ರಾರಂಭದಲ್ಲಿಯೇ ಉತ್ತರ ಕರ್ನಾಟಕದ ಹಲವು ಕಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ನೆರೆಯಿಂದ ಸಂತ್ರಸ್ತರಾದವರು ಸೂರಿಲ್ಲದೆ ಅತಂತ್ರ ಬದುಕು ನಡೆಸುತ್ತಿದ್ದಾರೆ. ಆದರೆ, ಸರಕಾರ ಇದರ ಬಗ್ಗೆ ಗಮನ ನೀಡದಿರುವುದು ವಿಷಾಧನೀಯ ಎಂದು ಹೇಳಿದ್ದಾರೆ.

ವಿದೇಶಿ ಪ್ರವಾಸಿಗರನ್ನು ಸೆಳೆಯಲು ಕ್ಯಾಸಿನೋ ತೆರೆಯಬೇಕೆಂಬ ಉದ್ದೇಶ ಸರಕಾರಕ್ಕಿದ್ದರೆ, ನೇರವಾಗಿ ಸರಕಾರವೇ ಅದನ್ನು ಆರಂಭಿಸಬೇಕು. ಆದರೆ, ಇದರಲ್ಲಿ ಬಂಡವಾಳ ಹೂಡಿಕೆ ಮಾಡುವುದಿಲ್ಲ, ಆರಂಭಕ್ಕೆ ಅನುಮತಿ ನೀಡುತ್ತೇವೆ ಎನ್ನುವುದು ಭ್ರಷ್ಟಾಚಾರಕ್ಕೆ ದಾರಿಯಾಗುತ್ತದೆ. ಹೀಗಾಗಿ, ಈ ನಿಲುವನ್ನು ಕಿಸಾನ್ ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

ಕಾಫಿ ಬೆಳೆಗಾರರ ಸಮಸ್ಯೆ, ಅಡಿಕೆ ಬೆಳೆಗಾರರ ಸಮಸ್ಯೆ, ಒತ್ತುವರಿ ಸಮಸ್ಯೆ, ಹಕ್ಕುಪತ್ರ ಸಮಸ್ಯೆಗಳೀಗೆ ಸ್ಪಂದಿಸಬೇಕು. ಅಲ್ಲದೆ, ಕೊಪ್ಪದ ಸಹಕಾರ ಸಾರಿಗೆ ಮುಚ್ಚುವ ನಿರ್ಧಾರದೊಂದಿಗೆ ಜೀವನ ನಿರ್ವಹಣೆಗೆ ದಾರಿ ತೋರದೆ ನಿಂತಿರುವ ಕುಟುಂಬಗಳ ನೆರವಿಗೆ ನಿಲ್ಲುವಂತೆ, ಸಹಕಾರ ಸಾರಿಗೆಯ ಪುನಶ್ಚೇತನ ಮಾಡಬೇಕು ಎಂದು ಕಿಸಾನ್ ಕಾಂಗ್ರೆಸ್ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News