ಗುಂಡಿಕ್ಕಿದರೂ ಸಿಎಎ ವಿರೋಧಿ ಪ್ರತಿಭಟನೆ ಕೈಬಿಡುವುದಿಲ್ಲ: ಇಮ್ರಾನ್ ಪಾಷಾ

Update: 2020-02-23 13:28 GMT
Photo: facebook.com/imranpasha.BBMP

ಬೆಂಗಳೂರು, ಫೆ.23: ಪಿಸ್ತೂಲಿನಿಂದ ನನ್ನನ್ನು ಗುಂಡಿಕ್ಕಿ ಕೊಲೆಗೈದರೂ, ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಪ್ರಕ್ರಿಯೆ ವಿರೋಧಿಸಿ ನಡೆಸುವ ಪ್ರತಿಭಟನೆಗಳನ್ನು ಕೈಬಿಡುವುದಿಲ್ಲ ಎಂದು ಬಿಬಿಎಂಪಿ ಜೆಡಿಎಸ್ ಸದಸ್ಯ ಇಮ್ರಾನ್ ಪಾಷಾ ತಿಳಿಸಿದ್ದಾರೆ.

ಪಾಕಿಸ್ತಾನ ಪರ ಘೋಷಣೆ ಆರೋಪ ಪ್ರಕರಣ ಸಂಬಂಧ ಶನಿವಾರ ರಾತ್ರಿ ಇಲ್ಲಿನ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ಬಳಿಕ ಅವರು, ತಮ್ಮ ಕ್ಷೇತ್ರವ್ಯಾಪ್ತಿಯ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಸಂವಿಧಾನ ಉಳಿಸಲು ಮತ್ತು ಸಂವಿಧಾನ ವಿರೋಧಿ ಕಾನೂನುಗಳನ್ನು ವಿರೋಧಿಸಲು ಫೆ.20 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಅಮೂಲ್ಯ ಹೇಳಿಕೆಗೂ ಆಯೋಜಕರಿಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ತನಿಖೆಯಾಗಲಿ ಎಂದರು.

ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸುವುದು ಪ್ರತಿಯೊಬ್ಬ ದೇಶವಾಸಿಗಳ ಕರ್ತವ್ಯ. ಸಮಾನತೆ, ಜಾತ್ಯತೀತ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ಸೇರಿದಂತೆ ಹತ್ತಾರು ಉದಾತ್ತ ಸಂಗತಿಗಳನ್ನು ಒಳಗೊಂಡಿರುವ ನಮ್ಮ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ. ಇಂಥ ಸಂವಿಧಾನವನ್ನು ಕೇಂದ್ರ ಸರಕಾರ ತಿರುಚಲು ಹೊರಟಿದೆ. ಎನ್‌ಆರ್‌ಸಿ, ಸಿಎಎ ಕಾಯ್ದೆ ಜಾರಿಗೊಳಿಸುವ ಮೂಲಕ ದೇಶವಾಸಿಗಳಲ್ಲಿ ಜಾತಿ, ದ್ವೇಷ ಭಾವನೆ ಮೂಡಿಸುತ್ತಿದೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News