ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಡಿಸಿಎಂ ಬಳಿ ನ್ಯಾಯ ಕೇಳಲು ಹೋದ ನ್ಯಾಯವಾದಿ ಬಂಧನ

Update: 2020-02-23 14:37 GMT

ಬಾಗಲಕೋಟೆ, ಫೆ.23: ಅರ್ಹ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಮನೆಗೆ ನ್ಯಾಯ ಕೇಳಲು ಹೋಗುವ ದಾರಿ ಮಧ್ಯದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂಬ ಆರೋಪದ ಮೇಲೆ ಕಲಂ 353ರಡಿಯಲ್ಲಿ ನ್ಯಾಯವಾದಿ ಯಲ್ಲಪ್ಪ ಹೆಗಡೆ ಅವರನ್ನು ಬಂಧಿಸಿದ್ದು, ಘಟನೆಗೆ ರೈತ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. 

ಕಳೆದ ಆಗಸ್ಟ್‌ನಲ್ಲಿ ಬಂದ ಪ್ರವಾಹದಲ್ಲಿ ಸಂತ್ರಸ್ತರಾದವರಿಗೆ ಈವರೆಗೂ ಬಿಡಿಗಾಸೂ ಪರಿಹಾರ ದೊರಕಿಲ್ಲ. ಆದ ಕಾರಣ ಮರು ಸಮೀಕ್ಷೆ ಮಾಡಿ, ಬಂದಾಗಿರುವ ಪರಿಹಾರವನ್ನು ಪುನಃ ಪ್ರಾರಂಭಿಸಿ ಅರ್ಹ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ನ್ಯಾಯವಾದಿ ಯಲ್ಲಪ್ಪ ಹೆಗಡೆ ಅವರ ನೇತೃತ್ವದಲ್ಲಿ ಮಳಲಿ ಗ್ರಾಮದ ಗ್ರಾಮಸ್ಥರು ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಪ್ರವಾಸಿ ಮಂದಿರಲ್ಲಿ ಮನವಿ ಕೊಡಲು ಹೋಗಿದ್ದರು. ಆದರೆ ಮನವಿ ಸ್ವೀಕರಿಸಿ ಯಾವುದೇ ಭರವಸೆ ನೀಡದೆ ಸಚಿವರು ಅಲ್ಲಿಂದ ತೆರಳಿದ್ದರು ಎನ್ನಲಾಗಿದೆ.

ಸಚಿವರ ವರ್ತನೆ ಖಂಡಿಸಿ ಸಚಿವರ ಮನೆಗೆ ನ್ಯಾಯ ಕೇಳಲು ಹೋಗುತ್ತಿದ್ದಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂಬ ಆರೋಪದ ಮೇಲೆ ಪೊಲೀಸರು ಯಲ್ಲಪ್ಪ ಹೆಗಡೆ ಸೇರಿ 6 ಜನರನ್ನು ಬಂಧಿಸಿದ್ದಾರೆ. ಅವರನ್ನು ಬಿಡುಗಡೆ ಮಾಡಿ ಎಂದು ಪ್ರತಿಭಟನೆ ನಡೆಸಿದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಬಳಿಕ ಮಧ್ಯ ರಾತ್ರಿ ಹೋರಾಟಗಾರರನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News