×
Ad

ಪೋಷಕರನ್ನು ನಿರ್ಲಕ್ಷಿಸಿದ ಮಗನಿಗೆ ಪ್ರತಿ ತಿಂಗಳು 20,000 ರೂ. ಜೀವನಾಂಶ ನೀಡಲು ನ್ಯಾಯ ಮಂಡಳಿ ಆದೇಶ

Update: 2020-02-23 21:57 IST

ರಾಯಚೂರು, ಫೆ.23: ಉತ್ತಮ ಕೆಲಸ ಸಿಕ್ಕ ಬಳಿಕ ತಂದೆ, ತಾಯಿಯನ್ನು ನಿರ್ಲಕ್ಷಿಸಿದ್ದ ಮಗನಿಗೆ ಹಿರಿಯ ನಾಗರೀಕರ ರಕ್ಷಣಾ ನ್ಯಾಯ ಮಂಡಳಿಯು ಪೋಷಕರಿಗೆ ಪ್ರತಿ ತಿಂಗಳು 20 ಸಾವಿರ ರೂ.ಜೀವನಾಂಶ ನೀಡಲು ಆದೇಶಿಸಿದೆ. 

ರಾಯಚೂರು ನಗರದ ನಿವಾಸಿ ಬೂದೆಪ್ಪ(ಹೆಸರು ಬದಲಾಯಿಸಿದೆ) ಕೂಲಿ ಮಾಡಿ ತನ್ನ ಐದು ಜನ ಮಕ್ಕಳನ್ನು ಓದಿಸುತ್ತಿದ್ದಾರೆ. ಅವರಲ್ಲಿ ಹಿರಿಯ ಮಗ ವರಪ್ರಸಾದ್(ಹೆಸರು ಬದಲಾಯಿಸಿದೆ) ಓದು ಮುಗಿಸಿ, ಮೊಬೈಲ್ ಕಂಪೆನಿಯೊಂದರಲ್ಲಿ ನೆಟ್‌ವರ್ಕ್ ಪ್ಲಾನಿಂಗ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಉಳಿದ ನಾಲ್ವರು ಈಗಲೂ ಓದುತ್ತಿದ್ದಾರೆ.

ತಿಂಗಳಿಗೆ 43 ಸಾವಿರ ಸಂಬಳ ಬರುತ್ತಿದ್ದರೂ ಆತ ಮನೆಗೆ ಸ್ವಲ್ಪ ಹಣವನ್ನೂ ಕೊಡುತ್ತಿರಲಿಲ್ಲ. ಕೆಲಸಕ್ಕೆ ಸೇರಿ ಸಂಬಳ ಎಣಿಸಲು ಆರಂಭವಾದ ಮೇಲೆ ಹಿರಿಯ ಮಗ ಮನೆಗೆ ಬರುವುದನ್ನೇ ಬಿಟ್ಟಿದ್ದ. ಮೊದಲೇ ಕಷ್ಟದಲ್ಲಿರುವ ಕುಟುಂಬ ಮಗನ ನಡವಳಿಕೆಯಿಂದ ಮತ್ತಷ್ಟು ಕಂಗಾಲಾಯಿತು. ತಂದೆಯು ಮನೆಗೆ ಬಾ ಎಂದು ಎಷ್ಟೇ ಬೇಡಿಕೊಂಡರೂ ಮಗ ಮನೆಗೆ ಬರಲಿಲ್ಲ. ಇದರಿಂದ ಬೇಸತ್ತ ತಂದೆ ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರೀಕರ ರಕ್ಷಣಾ ನ್ಯಾಯ ಮಂಡಳಿ ಮೆಟ್ಟಿಲೇರಿ ಮಗನ ಮೇಲೆ ದೂರು ನೀಡಿದ್ದಾರೆ.

ವಾದ ವಿವಾದ ಪರಿಶೀಲಿಸಿದ ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರೀಕರ ರಕ್ಷಣಾ ನ್ಯಾಯ ಮಂಡಳಿ ಹಾಗೂ ರಾಯಚೂರು ಉಪವಿಭಾಗದ ಉಪವಿಭಾಗಾಧಿಕಾರಿ ಸಂತೋಷ ಎಸ್ ಕಾಮಗೌಡ ಪೋಷಕರಿಗೆ ಜೀವನಾಂಶ ನೀಡುವಂತೆ ಆದೇಶ ನೀಡಿದ್ದಾರೆ.

ಆದೇಶದಲ್ಲೇನಿದೆ: ಪ್ರತಿ ತಿಂಗಳು 10ನೆ ತಾರೀಖಿನ ಒಳಗೆ 20 ಸಾವಿರ ರೂಪಾಯಿಯನ್ನು ತನ್ನ ತಂದೆಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ತಿಂಗಳಿಗೆ ಒಮ್ಮೆ ತಂದೆ ತಾಯಿಯನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಬೇಕು. ರವಿವಾರ ದೂರವಾಣಿ ಮೂಲಕ ಸಂಪರ್ಕಿಸಿ ಆರೋಗ್ಯ ವಿಚಾರಿಸಬೇಕು ಎಂದು ಆದೇಶ ನೀಡಲಾಗಿದೆ. ಸ್ವಯಂ ಪ್ರೇರಣೆಯಿಂದ ತಂದೆ ಹಾಗೂ ಮಗ ಒಪ್ಪಿದ್ದರಿಂದ ಈ ಆದೇಶವನ್ನು ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News