×
Ad

ಮಸೀದಿಗೆ ನುಗ್ಗಿ ಅಪರಿಚಿತರಿಂದ ಧರ್ಮಗುರುವಿನ ಮೇಲೆ ಹಲ್ಲೆ: ಆರೋಪ

Update: 2020-02-23 22:34 IST

ಮಡಿಕೇರಿ, ಫೆ.23: ನಾಲ್ವರು ಅಪರಿಚಿತರು ಮಸೀದಿಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿ ಬಳಿಕ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಕಾರಣಕ್ಕೆ ಮಸೀದಿಯಲ್ಲಿದ್ದ ಧರ್ಮಗುರುವೊಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಹಾತೂರಿನಲ್ಲಿ ನಡೆದಿದೆ. 

ಪಾಲಿಬೆಟ್ಟ ಸಮೀಪದ ಹುಂಡಿ ನಿವಾಸಿ ಮೂಸ ಮುಸ್ಲಿಯಾರ್ ಎಂಬವರೇ ಅಪರಿಚಿತರಿಂದ ತೀವ್ರವಾಗಿ ಹಲ್ಲೆಗೊಳಗಾದ ಧರ್ಮಗುರು. ಅವರು ಗೋಣಿಕೊಪ್ಪಲು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. 

ಗೋಣಿಕೊಪ್ಪಲು-ವಿರಾಜಪೇಟೆ ಮುಖ್ಯ ರಸ್ತೆಯಲ್ಲಿರುವ ಹಾತೂರು ಮುಹಿದ್ದೀನ್ ಜುಮಾ ಮಸೀದಿಗೆ ಶನಿವಾರ ಬೆಳಗಿನ ಜಾವ ಕೇರಳ ರಾಜ್ಯ ನೊಂದಣಿಯ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು ಮಸೀದಿಯ ಕಾಂಪೌಂಡ್ ಹಾರಿ ಒಳ ಪ್ರವೇಶಿಸಿದ್ದಾರೆ. ಇದನ್ನು ಆಕ್ಷೇಪಿಸಿದ ಮೂಸ ಮುಸ್ಲಿಯಾರ್ ಅವರಿಗೆ ತಂಡದಲ್ಲಿದ್ದ ಓರ್ವ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಘಟನೆ ಬಳಿಕ ಅಪರಿಚಿತರು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಲಾಗಿದೆ.

ಘಟನೆಯನ್ನು ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು) ಅವರು ತೀವ್ರವಾಗಿ ಖಂಡಿಸಿದ್ದು,  ಆರೋಪಿಗಳು ಎಲ್ಲಿಯವರೇ ಆಗಿದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ನಾಲ್ವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಲಾಗಿದೆ ಎಂದು ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕ ರಾಮರೆಡ್ಡಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News