ಪಕ್ಷದಲ್ಲಿ ಯಾವುದೇ ಆಂತರಿಕ ಭಿನ್ನಾಬಿಪ್ರಾಯಗಳಿಲ್ಲ: ಸಚಿವ ಜಗದೀಶ್ ಶೆಟ್ಟರ್

Update: 2020-02-23 17:20 GMT

ಮೈಸೂರು,ಫೆ.23: ಶಾಸಕ ಮಹೇಶ್ ಕುಮುಟವಳ್ಳಿ ವಿಚಾರದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಎಮೋಷನಲ್ ಆಗಿ ಮಾತನಾಡಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹೇಶ್ ಕುಮುಟವಳ್ಳಿಯನ್ನು ಕರೆದುಕೊಂಡು ಬಂದಿದ್ದು ನಾನೆ ಎಂಬ ಉದ್ದೇಶದಿಂದ ಈ ರೀತಿ ಮಾತನಾಡಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಆಂತರಿಕ ಭಿನ್ನಾಬಿಪ್ರಾಯಗಳಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿಗಳು ಅವರನ್ನು ಕರೆಸಿ ಮಾತನಾಡಲಿದ್ದಾರೆ. ನಮ್ಮ ಮನೆಯಲ್ಲಿ ಶಾಸಕರು ಪ್ರತ್ಯೇಕ ಸಭೆ ನಡೆಸಿಲ್ಲ, ಇದು ವದಂತಿ ಎಂದು ಸ್ಪಷ್ಟಪಡಿಸಿದರು.

ದೇಶದ್ರೋಹ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಲ್ಲಿಯೇ ಅನ್ನ ತಿಂದು ಇಲ್ಲಿಯೇ ದೇಶ ದ್ರೋಹದ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು, ಇದು ಕ್ಷಮಿಸುವ ಆಪರಾಧವಲ್ಲ, ತನಿಖೆ ಪ್ರಗತಿಯಲ್ಲಿದೆ, ರಾಜ್ಯ ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿದೆ. ಬಂಡವಾಳ ಹೂಡಿಕೆ ವಿಚಾರದಲ್ಲಿ ಇದುವರೆಗೂ ಬೆಂಗಳೂರು ಮಾತ್ರ ಮುಂಚೂಣೀಯಲ್ಲಿತ್ತು. ಆದರೀಗ ರಾಜ್ಯದ ಇತರ ನಗರಗಳಲ್ಲೂ ಬಂಡವಾಳ ಹೂಡಿಕೆ ಮಾಡಲು ಪೂರಕ ವಾತಾವರಣವಿದೆ. ಟೈಪ್ ಟೂ ನಗರವಾಗಿರುವ ಮೈಸೂರು ಸೇರಿದಂತೆ ರಾಜ್ಯದ ಇತರ ನಗರಗಳಲ್ಲೂ ಬಂಡವಾಳ ಹೂಡಿಕೆ ಮಾಡಲು ಉದ್ದಿಮೆದಾರರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಮುಂಬೈ ನಲ್ಲಿ ನಡೆಸಿದ ರೋಡ್‍ಶೋ ಕೂಡ ಸಾಕಷ್ಟು ಪರಿಣಾಮ ಬೀರಿದೆ. ಅದರಿಂದ ಮಹಾರಾಷ್ಟ್ರದ ಉದ್ದಿಮೆದಾರರು ರಾಜ್ಯದಲ್ಲಿ ಬಂಡವಾಲ ಹೂಡಲು ಮುಂದಾಗಿದ್ದಾರೆ. ಕೈಗಾರಿಕೆಗಲ ಸ್ಥಾಪನೆಗೆ ಒಲವು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ದಾವೋಸ್‍ನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲೂ ಉದ್ದಿಮೆದಾರರು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಕೋರಲಾಗಿದೆ. ಮುಂದಿನ ನವೆಂಬರ್ 3 ಮತ್ತು 4 ರಂದು ಮತ್ತೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News