ವಸತಿ ನಿಲಯಕ್ಕೆ ಕಾರಜೋಳ ದಿಢೀರ್ ಭೇಟಿ: ಕಳಪೆ ಗುಟಮಟ್ಟದ ಊಟ ನೀಡಿದ ವಾರ್ಡನ್‌ಗೆ ತರಾಟೆ

Update: 2020-02-23 17:26 GMT

ರಾಯಚೂರು, ಫೆ.23: ಇಲ್ಲಿನ ಸಿಂಧನೂರು ತಾಲೂಕಿನ ವಸತಿ ನಿಲಯಕ್ಕೆ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಶನಿವಾರ ರಾತ್ರಿ ದಿಢೀರ್ ಭೇಟಿ ನೀಡಿ, ವಿದ್ಯಾರ್ಥಿ ನಿಲಯದಲ್ಲಿನ ಊಟದ ರುಚಿ ಮಾಡಿ, ವಾರ್ಡನ್‌ಗೆ ತರಾಟೆಗೆ ತಗೆದುಕೊಂಡಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿ ನಿಲಯಗಳ ಉತ್ತಮ ನಿರ್ವಹಣೆಗೆ ಸರಕಾರ ಸಾಕಷ್ಟು ಅನುದಾನ ನೀಡಿದರೂ ಕಳಪೆ ಗುಣಮಟ್ಟದ ಊಟ ನೀಡಿ, ಸ್ವಚ್ಚತೆಯನ್ನು ಕಾಪಾಡದೇ ವಿದ್ಯಾರ್ಥಿಗಳಿಗೆ ರೋಗ ಬರುವಂತೆ ಮಾಡುವುದು ಸರಿಯಲ್ಲ. ಇದು ಇಲ್ಲಿಗೆ ನಿಲ್ಲಬೇಕು. ಇಲ್ಲದಿದ್ದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಹಾಸ್ಟೆಲ್‌ನ ಅಡುಗೆ ತಯಾರಕರು ಸರಿಯಾಗಿ ಬಾರದಿರುವುದನ್ನು ವಿದ್ಯಾರ್ಥಿಗಳು ಸಚಿವರ ಗಮನಕ್ಕೆ ತಂದಾಗ, ಅಡುಗೆ ತಯಾರಕರು ಹಾಗೂ ಸಹಾಯಕರು ಉಚಿತವಾಗಿ ಕೆಲಸ ಮಾಡುತ್ತಿಲ್ಲ. ಬೇಜಾವಾಬ್ದಾರಿ ಹೊಂದಿರುವವರ ಸೇವೆಯನ್ನು ಮುಂದು ವರೆಸಬಾರದು ಎಂದು ವಾರ್ಡ್‌ಗೆ ಸೂಚಿಸಿದರು.

ಹಾಸ್ಟೆಲ್‌ನಿಂದಲೇ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕುಮಾರ ನಾಯಕ್‌ಗೆ ದೂರವಾಣಿ ಕರೆ ಮಾಡಿದ ಅವರು, ವಿದ್ಯಾರ್ಥಿ ನಿಲಯದ ಅವ್ಯವಸ್ಥೆಗೆ ಕಾರಣರಾಗಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 4ಲಕ್ಷ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆ, ತಾಲೂಕು, ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಹಾಸ್ಟೆಲ್‌ನ ಊಟ ಹಾಗೂ ಸೌಲಭ್ಯಗಳನ್ನು ಪರಿಶೀಲಿಸಬೇಕೆಂದರು.

ಯಾವುದೇ ವಿದ್ಯಾರ್ಥಿಗೂ ಕಳಪೆ ಗುಣಮಟ್ಟದ ಊಟ ಹಾಗೂ ಕಳಪೆ ಗುಣಮಟ್ಟದ ಸೌಲಭ್ಯ ನೀಡಬಾರದು. ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಊಟೋಪಚಾರ ನೀಡುವುದರ ಜೊತೆಗೆ ಉತ್ತಮ ಪರೀಕ್ಷಾ ಫಲಿತಾಂಶ ಬರುವಂತೆ ಪಾಠ ಪ್ರವಚನ ನಡೆಸಬೇಕು. ವಿಶೇಷ ತರಗತಿಗಳನ್ನು ನಡೆಸಲು ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News