ದೇಶದ, ಪೋಷಕರ ಋಣವನ್ನು ಮಕ್ಕಳು ತೀರಿಸಬೇಕು: ಬಸವರಾಜ ಹೊರಟ್ಟಿ

Update: 2020-02-23 17:49 GMT

ಧಾರವಾಡ, ಫೆ.23: ಮಕ್ಕಳು ನಾಡಿನ ಸಂಪತ್ತು. ಜನ್ಮ ನೀಡಿದ ತಂದೆ ತಾಯಿಗಳಿಗೆ, ಜನ್ಮ ಭೂಮಿಗೆ, ಶಿಕ್ಷಣ ನೀಡಿದ ಗುರುಗಳಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ಕೀರ್ತಿ ತರಬೇಕು ಎಂದು ವಿಧಾನಪರಿಷತ್ತಿನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. 

ನಗರದ ಡಾ.ಮಲ್ಲಿಕಾರ್ಜುನ ಮನಸೂರ ಸಭಾ ಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ತರಗತಿಗಳಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾಗಿರುವ ಒಟ್ಟು 383 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಮಾತೃ ಭಾಷೆ ಎನ್ನುವುದು ತಾಯಿ ಬೇರಾಗಿದೆ. ಮಾತೃ ಭಾಷೆ, ದೇಶದ, ನಾಡಿನ, ತಂದೆ ತಾಯಿಗಳ ಋಣವನ್ನು ಮಕ್ಕಳು ತೀರಿಸಬೇಕು. ಅದೇ ರೀತಿ, ಪೋಷಕರು, ಗುರುಗಳು ಮಕ್ಕಳಲ್ಲಿ ಇರುವಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಕರೆ ನೀಡಿದರು.

ತಂದೆ ತಾಯಿ ತಮ್ಮ ತ್ಯಾಗದ ಮೂಲಕ ಸರ್ವಸ್ವವನ್ನೂ ಮಕ್ಕಳಿಗೆ ನೀಡುತ್ತಾರೆ. ಉತ್ತಮ ಸಂಸ್ಕಾರ ಕೊಡುತ್ತಾರೆ. ಪಾಲಕರ ಶ್ರಮದ ಬಗ್ಗೆ ಮಕ್ಕಳಲ್ಲಿ ಅರಿವು ಇರಬೇಕು. ಪಾಲಕರು ನೀಡಿದ ಉತ್ತಮ ಸಂಸ್ಕಾರವನ್ನು ಪಡೆದು ಮಕ್ಕಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಬಸವರಾಜ ಹೊರಟ್ಟಿ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ವೃತ್ತಿಗಿಂತ ಪ್ರವೃತ್ತಿ ಮುಖ್ಯವಾದದ್ದು. ನಮ್ಮ ಬದುಕಿನ ಕೊನೆಯವರೆಗೂ ಪ್ರವೃತ್ತಿ ಎಂಬುದು ಶ್ರೇಷ್ಟವಾದದ್ದು. ಪ್ರವೃತ್ತಿ ನಮಗೆ ಸಂಸ್ಕಾರ, ಭಾಷೆಯ ಸೊಬಗನ್ನು ಕೊಡುವುದರ ಜೊತೆಗೆ ಜೀವನದುದ್ದಕ್ಕೂ ನಮ್ಮ ಸಂಗಾತಿಯಾಗಿ, ಬದುಕಿನ ಪ್ರತಿಯೊಂದು ಹಂತವನ್ನು ಕಲಿಸುತ್ತದೆ ಎಂದರು.

ಅದ್ಭುತ ಗುರುಪರಂಪರೆ ಹೊಂದಿರುವ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಪಾಶ್ಚಿಮಾತ್ಯ ವಿಚಾರಗಳನ್ನು ಅಳವಡಿಸಿದ್ದರಿಂದ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಗೊಂದಲಗಳಾಗಿವೆ. ವಿದ್ಯಾರ್ಥಿಗಳ ಜೀವನದಲ್ಲಿ ಗುರು ಮತ್ತು ಗುರಿ ಅತಿ ಮುಖ್ಯವಾದ ಪಾತ್ರ ನಿರ್ವಹಿಸುತ್ತಾರೆ. ಅವರು ಇಲ್ಲದೆ ಇದ್ದಲ್ಲಿ ವಿದ್ಯಾರ್ಥಿಗಳು ಅಡ್ಡ ಹಾದಿ ಹಿಡಿಯಬಹುದು. ಇದಕ್ಕೆ ಇತ್ತೀಚೆಗೆ ನಡೆದ ಕೆಲ ಘಟನೆಗಳೆ ಸಾಕ್ಷಿ ಎಂದು ಅವರು ಹೇಳಿದರು.

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 25 ಸಾವಿರ ರೂ.ನಗದು ಪುರಸ್ಕಾರ, ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 10 ಸಾವಿರ ರೂ.ಪ್ರಥಮ ಬಹುಮಾನ, ದ್ವಿತೀಯ ಬಹುಮಾನ 9 ಸಾವಿರ ರೂ., ತೃತೀಯ ಸ್ಥಾನ 8 ಸಾವಿರ ರೂ. ಮತ್ತು ಪ್ರಮಾಣ ಪತ್ರ ನೀಡಿ ಗೌರಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News