ಹನೂರು: ಮಲೆಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌

Update: 2020-02-23 18:01 GMT

ಹನೂರು: ಮಲೆಮಹದೇಶ್ವರ ಬೆಟ್ಟಕ್ಕೆ ರಾಜ್ಯದ ಲಕ್ಷಾಂತರ ಮಂದಿ ಆಗಮಿಸಿದ್ದು, ಈ ಹಿನ್ನಲೆ ಹನೂರು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಇದರಿಂದಾಗಿ ವಾಹನಗಳ ಸವಾರರು ಒಂದು ಕಡೆಯಿಂದ ಮತ್ತೊಂದು ಕಡೆ ತೆರಳಲು ಪರದಾಟ ನಡೆಸಿದರು.

ಶಿವರಾತ್ರಿ ಹಬ್ಬ, ಎರಡನೇ ಶನಿವಾರ, ರವಿವಾರ ಹೀಗೆ ಮೂರು ದಿನ ರಜೆ ಇದ್ದ ಹಿನ್ನಲೆ ಮಹಾಶಿವರಾತ್ರಿಯ ಜಾತ್ರೆ ಮಹೋತ್ಸವದ ಪ್ರಯುಕ್ತ  ಮಲೆಮಹದೇಶ್ವರ ಬೆಟ್ಟಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಹೀಗಾಗಿ, ಹಲವು ಕಡೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಪಟ್ಟಣದ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣದ ರಸ್ತೆ, ಪೆಟ್ರೋಲ್ ಬಂಕ್ ರಸ್ತೆ, ಅಂಗಡಿ ಬೀದಿ ರಸ್ತೆಯವರೆಗೆ ಕಾರು, ಬೈಕ್‌ ಸಹಿತ ಹಲವು ವಾಹನಗಳು ಸುಮಾರು ಅರ್ಧ ತಾಸಿಗೂ ಹೆಚ್ಚು ಸಮಯ ಸಾಲುಗಟ್ಟಿ ನಿಂತಿದ್ದವು.

ಅಲ್ಲದೆ, ಮಧುವನಹಳ್ಳಿ ಗ್ರಾಮ, ಕೌದಳ್ಳಿ ಇನ್ನಿತರ ಪ್ರದೇಶಗಳಲ್ಲಿಯೂ ವಾಹನ ದಟ್ಟಣೆ ಮಾಮೂಲಿ ದಿನಗಳಿಗಿಂತ ಹೆಚ್ಚಾಗಿತ್ತು. ತುರ್ತು ಕಾರ್ಯದ ನಿಮಿತ್ತ ತೆರಳುವವರಿಗೆ ಅಡ್ಡಿಯುಂಟಾಯಿತು. ಅನೇಕ ಕಡೆಗಳಲ್ಲಿ ಮಳೆಯಿಂದಾಗಿ ರಸ್ತೆಗಳು ಹಾಳಾಗಿ, ಅಲ್ಲಲ್ಲಿ ಗುಂಡಿ ಬಿದ್ದ ಕಾರಣ ವಾಹನಗಳಿಗೆ ಸರಾಗವಾಗಿ ಸಂಚರಿಸುವುದಕ್ಕೂ ತೊಂದರೆಯಾಗುತ್ತಿದೆ. ಅಲ್ಲದೆ ಸುಗಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. 

ಜನಪ್ರತಿನಿಧಿಗಳು ಮಲೆಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಮಾಡುತ್ತೇವೆ ಮತ್ತು ಕೊಳ್ಳೇಗಾಲದಿಂದ ಮತ್ತು ಹನೂರು ಪಟ್ಟಣದವರೆಗೆ 108 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್‌) ಮುಖಾಂತರ ಅಭಿವೃದ್ಧಿ ಮಾಡುತ್ತೇವೆಂದು ಹಲವು ವರ್ಷಗಳಿಂದ ಹೇಳುತ್ತಾರೆ. ಆದರೆ ಇನ್ನೂ ಅಭಿವೃದ್ಧಿಗೆ ಮುಂದಾಗದೇ ವಿಳಂಬ ಮಾಡುತ್ತಿರುವ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿ ಆಕ್ರೋಶದ ಮಾತುಗಳನ್ನಾಡುವ ದೃಶ್ಯಗಳು ಮಾಮೂಲಾಗಿತ್ತು.

Writer - ವರದಿ: ಅಭಿಲಾಷ್ ಗೌಡ

contributor

Editor - ವರದಿ: ಅಭಿಲಾಷ್ ಗೌಡ

contributor

Similar News