ರಾಜ್ಯದಲ್ಲಿ 'ಕ್ಯಾಸಿನೊ' ತೆರೆಯುವ ಬಗ್ಗೆ ಸಚಿವ ಸಿ.ಟಿ.ರವಿ ಸ್ಪಷ್ಟನೆ

Update: 2020-02-23 18:16 GMT

ಚಿಕ್ಕಮಗಳೂರು, ಫೆ.23: ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಪ್ರವಾಸಿ ತಾಣಗಳಲ್ಲಿ ಜೂಜು ಕೇಂದ್ರ (ಕ್ಯಾಸಿನೊ)ಗಳನ್ನು ತೆರೆಯುವುದಾಗಿ ಹೇಳಿಲ್ಲ. ಪ್ರವಾಸೋದ್ಯಮದ ಅಭಿವೃದ್ಧಿಗೆ ಕ್ಯಾಸಿನೊ ಕಾರಣ ಎಂದಷ್ಟೇ ಹೇಳಿದ್ದೇನೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕ್ರೀಡಾ ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.

ಪ್ರವಾಸಿ ತಾಣಗಳಲ್ಲಿ ಸರಕಾರ ಜೂಜು ಕೇಂದ್ರಗಳನ್ನು ಆರಂಭಿಸಲಿದೆ ಎಂಬ ಹೇಳಿಕೆ ಕುರಿತು ರವಿವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇತ್ತೀಚೆಗೆ ಎಫ್‌ಕೆಸಿಸಿಐಯಿಂದ ನಡೆದ ಸಂವಾದದಲ್ಲಿ ನಾನು ಪಾಲ್ಗೊಂಡಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೆ ಪ್ರವಾಸಿ ತಾಣಗಳ ವ್ಯಾಪ್ತಿಯಲ್ಲಿ ಜೂಜು ಕೇಂದ್ರಗಳನ್ನು ತೆರೆಯಲು ಸರಕಾರ ಮುಂದಾಗಿದೆ ಎಂದು ಹೇಳಿಲ್ಲ. ಎಫ್‌ಕೆಸಿಸಿಐ ಸಂಸ್ಥೆಯವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಪ್ರವಾಸೋದ್ಯಮದ ಅಭಿವೃದ್ಧಿಗೆ ಹತ್ತಾರು ಯೋಜನೆಗಳನ್ನು ಕೈಗೊಳ್ಳಬಹುದಾಗಿದೆ. ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಿರುವ ಹಲವು ಅಂಶಗಳಲ್ಲಿ ಕ್ಯಾಸಿನೊ ಒಂದಾಗಿದೆ. ಆದರೆ ಅದನ್ನು ರಾಜ್ಯದಲ್ಲಿ ಜಾರಿಗೆ ತರುತ್ತೇವೆಂದು ಹೇಳಿಲ್ಲ ಎಂದು ಸಚಿವ ರವಿ ತಿಳಿಸಿದರು.

ಗೋವಾದಲ್ಲಿ ಜೂಜು ಕೇಂದ್ರಗಳಿಂದಾಗಿ ಅಲ್ಲಿನ ಪ್ರವಾಸೋದ್ಯಮ ಲಕ್ಷಾಂತರ ಜನರನ್ನು ಸೆಳೆದಿದೆ. ಅಲ್ಲಿಗೆ ನಮ್ಮ ರಾಜ್ಯದ ಜನರೂ ಹೋಗುತ್ತಾರೆ. ಅದೇ ರೀತಿ ಶ್ರೀಲಂಕಾದಲ್ಲಿ ಕ್ಯಾಸಿನೊಗಳು ಅಲ್ಲಿನ ಪ್ರವಾಸೋದ್ಯಮದ ಆಕರ್ಷಣೆಗಳಾಗಿವೆ. ಅಲ್ಲಿಗೆ ಕರ್ನಾಟಕದಿಂದಲೂ ಜನ ಹೋಗುತ್ತಾರೆ. ನೆರೆಯ ಹಾಂಕಾಂಗ್, ಮಲೇಶಿಯಾ, ಬ್ಯಾಂಕಾಂಕ್, ಸಿಂಗಾಪೂರ್, ಥಾಯ್‌ಲ್ಯಾಂಡ್ ಸೇರಿದಂತೆ ಅಮೆರಿಕದ ಲಾಸ್ ವೇಗಾಸ್‌ಗಳಲ್ಲಿ ಕ್ಯಾಸಿನೊಗಳಿಂದಾಗಿಯೇ ಪ್ರವಾಸೋದ್ಯಮ ಬೆಳೆದಿದೆ ಎಂದು ಹೇಳಿದರು. ಸಂವಾದದಲ್ಲಿ ಹೆಲ್ತ್ ಟೂರಿಸಮ್, ಎಜುಕೇಶನ್, ಕಲ್ಚುರಲ್, ಹೆರಿಟೇಜ್, ವಿಲೇಜ್ ಟೂರಿಸಮ್ ಬಗ್ಗೆ ಮಾತನಾಡಿದ್ದೇನೆ ಎಂದರು.

ನಾನು ಸಂವಾದದಲ್ಲಿ ಏನು ಮಾತನಾಡಿದ್ದೇನೆಂಬುದರ ಬಗ್ಗೆ ವೀಡಿಯೊ ಮಾಡಲಾಗಿದೆ. ಅದನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ ಟೀಕಿಸುವವರು ಮಾತನಾಡಲಿ.
-ಸಿ.ಟಿ. ರವಿ, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News