ಶಿವಮೊಗ್ಗದಲ್ಲಿ ಎನ್‌ಎಸ್‌ಯುಐ ಧರಣಿ

Update: 2020-02-24 09:24 GMT

ಶಿವಮೊಗ್ಗ, ಫೆ.24: ಎಸೆಸೆಲ್ಸಿ ಪೂರ್ವಭಾವಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಿವಮೊಗ್ಗ ನಗರ ಎನ್‌ಎಸ್‌ಯುಐ ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಧರಣಿ ನಡೆಸಿದರು.

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಯುತ್ತಿದ್ದು, ಪ್ರತಿ ದಿನವೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದು, ಇದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ.ಈ ರೀತಿಯ ಘಟನೆಯನ್ನು  ಶಿವಮೊಗ್ಗ ನಗರ ಎನ್.ಎಸ್.ಯು.ಐ. ತೀವ್ರ ಖಂಡಿಸಿದೆ.
 ಪೂರ್ವಭಾವಿ ಪರೀಕ್ಷೆಯಲ್ಲೇ ಪ್ರಶ್ನೆಪತ್ರಿಕೆ ಮಾರಾಟ ಜಾಲ ಹುಟ್ಟಿಕೊಂಡಿದ್ದನ್ನು ಗಮನಿಸಿದರೆ, ಮುಖ್ಯಪರೀಕ್ಷೆಯಲ್ಲಿ ಅದಿನ್ಯಾವ ರೀತಿ ಪ್ರಶ್ನೆಪತ್ರಿಕೆ ಮಾರಾಟ ನಡೆಯಬಹುದು ಎಂಬ ಆತಂಕ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಎದುರಾಗಿದೆ. ಕೂಡಲೇ ಸರ್ಕಾರ ಪ್ರಶ್ನೆಪತ್ರಿಕೆ ಸೋರಿಕೆಗೆ ಘಟನೆಯನ್ನು ತನಿಖೆಗೊಳಪಡಿಸಬೇಕು. ಇದಕ್ಕೆ ಕಾರಣವಾಗಿರುವ ಇಲಾಖೆಯ ಅಧಿಕಾರಿ, ಸಿಬ್ಬಂದಿ  ಹಾಗೂ ಈ ಪ್ರಶ್ನೆಪತ್ರಿಕೆ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು. ಆ ಮೂಲಕ ಪೋಷಕರು-ವಿದ್ಯಾರ್ಥಿಗಳಿಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡಬೇಕು. ಪ್ರಶ್ನೆಪತ್ರಿಕೆ ಸೋರಿಕೆಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು  ಆಗ್ರಹಿಸಿದರು.

ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಚೇತನ್, ಶ್ರೀಜಿತ್, ಬಾಲಾಜಿ, ವಿನಯ್, ವಿಜಯ್, ರವಿ, ನಿತಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News