ಶಾಸಕರು, ಸರಕಾರಿ ಅಧಿಕಾರಿಗಳೂ ಕ್ಯಾಸಿನೊಗಳಿಗೆ ಹೋಗುತ್ತಾರೆ: ಸಚಿವ ಸಿ.ಟಿ.ರವಿ

Update: 2020-02-24 11:55 GMT

ಚಿಕ್ಕಮಗಳೂರು, ಫೆ.24: ಕ್ಯಾಸಿನೊ ಕೇಂದ್ರಗಳ ಸಂಬಂಧ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕ್ರೀಡಾ ಇಲಾಖೆ ಸಚಿವ ಸಿ.ಟಿ.ರವಿ ಇತ್ತೀಚೆಗೆ ನೀಡಿರುವ ಹೇಳಿಕೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಮಧ್ಯೆ, 'ಕ್ಯಾಸಿನೊ ಕೇಂದ್ರಗಳು ಪ್ರವಾಸೋದ್ಯಮ ಕ್ಷೇತ್ರದ ಏಳಿಗೆಗೆ ಪೂರಕವಾಗಿವೆ. ವಿದೇಶದಲ್ಲಿರುವ ಕ್ಯಾಸಿನೋ ಕೇಂದ್ರಗಳೂ ಸೇರಿದಂತೆ ನೆರೆ ರಾಜ್ಯ ಗೋವಾದಲ್ಲಿರುವ ಕ್ಯಾಸಿನೊ ಕೇಂದ್ರಗಳಿಗೆ ರಾಜ್ಯದಿಂದ ಸರಕಾರಿ ಅಧಿಕಾರಿಗಳು, ಶಾಸಕರು ಹೋಗುತ್ತಿದ್ದಾರೆ' ಎಂದು ಸಚಿವ ಸಿ.ಟಿ.ರವಿ ಹೇಳಿಕೆ ನೀಡಿದ್ದು, ಇದು ರಾಜ್ಯದಲ್ಲಿ ಕ್ಯಾಸಿನೋ ಕೇಂದ್ರಗಳ ಆರಂಭಕ್ಕೆ ರಾಜ್ಯ ಸರಕಾರ ಚಿಂತನೆ ನಡೆಸಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಸೋಮವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಮಿನಿ ಸಭಾಂಗಣದಲ್ಲಿ ಜಿಲ್ಲಾ ಉತ್ಸವದ ಕಾರ್ಯಕ್ರಮಗಳ ಸಂಬಂಧ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಕ್ಯಾಸಿನೊ ಕೇಂದ್ರಗಳ ಆರಂಭಕ್ಕೆ ಸರಕಾರ ಅನುಮತಿ ನೀಡಬೇಕೆಂಬುದು ನನ್ನ ಅಭಿಪ್ರಾಯವಲ್ಲ. ಇಂತಹ ಪ್ರಸ್ತಾವ ಸರಕಾರದ ಮುಂದೆಯೂ ಇಲ್ಲ. ಆದರೆ ಅಮೆರಿಕಾದ ಲಾಸ್ ವೇಗಾಸ್, ನಮ್ಮದೇ ದೇಶದ ಗೋವಾ ರಾಜ್ಯ ಕ್ಯಾಸಿನೋ ಕೇಂದ್ರಗಳಿಂದಾಗಿಯೇ ಪ್ರವಾಸೋದ್ಯಮಲ್ಲಿ ಅಭಿವೃದ್ಧಿ ಕಂಡಿದೆ ಎಂದು ಹೇಳಿದರು.

ಬೆಳಗಾವಿ ಅಧಿವೇಶನ ನಡೆದ ಸಂದರ್ಭದಲ್ಲಿ ಸರಕಾರಿ ಅಧಿಕಾರಿಗಳು, ಕೆಲ ಶಾಸಕರು ಗೋವಾದ ಕ್ಯಾಸಿನೊ ಕೇಂದ್ರಗಳಲ್ಲಿ ಆಡಿ ಬಂದಿದ್ದಾರೆ. ಬೆಳಗಾವಿ ವಿಧಾನಸಭೆಯ ಮೊಗಸಾಲೆಯಲ್ಲಿ ಕ್ಯಾಸಿನೊ ಕೇಂದ್ರಗಳಲ್ಲಾದ ಲಾಭ, ನಷ್ಟದ ಬಗ್ಗೆ ಚರ್ಚೆ ಮಾಡಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಪ್ರವಾಸೋದ್ಯಮದ ಪ್ರಶ್ನೆ ಬಂದಾಗ ಉದ್ಯಮದ ಅಭಿವೃದ್ಧಿಗೆ ಕ್ಯಾಸಿನೊಗಳು ಮಹತ್ವದ ಪಾತ್ರ ವಹಿಸುತ್ತವೆ. ನಮ್ಮ ರಾಜ್ಯದಿಂದ ವಿದೇಶಗಳಲ್ಲಿರುವ ಕ್ಯಾಸಿನೊಗಳಿಗೆ ಸಾವಿರಾರು ಮಂದಿ ಹೋಗುತ್ತಿದ್ದಾರೆ. ಕ್ಯಾಸಿನೊಗಳಿಂದಾಗಿ ಲಾಸ್ ವೇಗಾಸ್ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದು ಸಚಿವ ರವಿ ತಿಳಿಸಿದರು.

ರಾಜ್ಯದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಸಂಬಂಧ ಎಫ್‍ಕೆಸಿಸಿಐ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮದ ಏಳಿಗೆಗೆ ಕ್ಯಾಸಿನೊ ಒಂದು ಪ್ರಮುಖ ಅಂಶವಾಗಿದೆ ಎಂಬುದನ್ನು ಹೇಳಿದ್ದೇನೆಯೇ ಹೊರತು, ಅವುಗಳಿಗೆ ರಾಜ್ಯದಲ್ಲಿ ಅನುಮತಿ ನೀಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ರಾಜ್ಯದಲ್ಲಿ ಕ್ಯಾಸಿನೊಗಳಿಗೆ ಅನುಮತಿ ನೀಡಬೇಕೆಂಬುದು ನನ್ನ ನಿಲುವಲ್ಲ. ರಾಜ್ಯ ಸರಕಾರದ ಮುಂದೆಯೂ ಈ ಪ್ರಸ್ತಾವ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರವಾಸೋದ್ಯಮದ ಅಭಿವೃದ್ಧಿಗೆ ಸರಕಾರ ತನ್ನದೇ ಆದ ಯೋಜನೆಯನ್ನು ಜಾರಿ ಮಾಡುತ್ತಿದೆ. ಅವುಗಳಲ್ಲಿ ವಿಲೇಜ್ ಟೂರಿಸಂ, ಜಾನಪದ, ದಲಿತ ಸಂಸ್ಕೃತಿಯ ಪರಿಚಯ ಮಾಡುವಂತಹ ಪ್ರವಾಸೋದ್ಯಮಕ್ಕೆ ಸರಕಾರ ಚಿಂತನೆ ನಡೆಸಿದೆ. ವಿಲೇಜ್ ಟೂರಿಸಂ ಅಡಿಯಲ್ಲಿ ಹಂಪಿಯಲ್ಲಿ ಬಂಜಾರ ಸಮುದಾಯದ ಆಚಾರ ವಿಚಾರ, ಆಹಾರ, ಕಲೆ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಪರಿಚಯ ಮಾಡಿಕೊಡಲಾಗುವುದು, ಅಂತೆಯೇ ಮೈಸೂರು, ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಜಾನಪದ ಹಾಗೂ ದಲಿತ ಸಂಸ್ಕೃತಿಯ ಪರಿಚಯ ನೀಡುವ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುವುದು. ಇವುಗಳನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಕ್ಕೆ ತರಲಾಗುವುದು. ಇವುಗಳ ಅನುಷ್ಠಾನದಿಂದ ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿ ಸಾಧ್ಯವಿದೆ. ಕ್ಯಾಸಿನೊ ಕೇಂದ್ರಗಳೂ ಕೂಡ ಇಲ್ಲಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಕಾರಿಯಾಗಲಿವೆ. ಆದರೆ ಕ್ಯಾಸಿನೋಗಳ ಅನುಷ್ಠಾನವಾಗಬೇಕೆಂಬುದು ನನ್ನ ಅಭಿಪ್ರಾಯವಲ್ಲ ಎಂದು ಸಿ.ಟಿ.ರವಿ ಹೇಳಿದರು.

ಕ್ಯಾಸಿನೊ ಸಂಬಂದ ನಾನು ಆಡಿರುವ ಮಾತಿನ ಬಗ್ಗೆ ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸುತ್ತಿವೆ. ಸಂವಾದದಲ್ಲಿ ನಾನು ಆಡಿರುವ ಮಾತನ್ನು ಸರಿಯಾಗಿ ಕೇಳಿಸಿಕೊಂಡು ವಿರೋಧಿಗಳು ಮಾತನಾಡಲಿ, ಗುಜರಾತ್ ಹೊರತು ಪಡಿಸಿ ದೇಶದ ಎಲ್ಲ ರಾಜ್ಯಗಳಲ್ಲೂ ಮದ್ಯದ ವ್ಯಾಪಾರದಿಂದಾಗಿ ಬಹುಪಾಲು ಆದಾಯ ಬರುತ್ತಿವೆ. ಮದ್ಯಪಾನ ಕೆಟ್ಟದ್ದೆಂದೂ ಗೊತ್ತಿದ್ದರೂ ಅವುಗಳನ್ನೂ ಬ್ಯಾನ್ ಮಾಡಿಲ್ಲ ಏಕೆ? ಎಂದು ಪ್ರಶ್ನಿಸಿದ ಅವರು, ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಮದ್ಯ ಸೇರಿದಂತೆ ಎಲ್ಲ ರೀತಿಯ ಜೂಜು ಕೇಂದ್ರಗಳನ್ನು ರದ್ದು ಮಾಡಬೇಕೆನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಸಿ.ಟಿ.ರವಿ ಇದೇ ವೇಳೆ ಹೇಳಿದರು.

ಕ್ಯಾಸಿನೊ ಸಂಬಂಧ ನನ್ನ ಹೇಳಿಕೆಯನ್ನು ಟೀಕಿಸುತ್ತಿರುವ ಕಾಂಗ್ರೆಸ್ ಪಕ್ಷದವರು ನನ್ನ ಮನೆಯ ಮುಂದೆ ಅನಿರ್ಧಿಷ್ಟಾವಧಿಗೆ ಇಸ್ಪೀಟ್ ಆಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ಆದರೆ ಇಸ್ಪೀಟ್ ಆಡಿ ಧರಣಿ ಮಾಡುವುದು ಯಾವ ರೀತಿಯ ಪ್ರತಿಭಟನೆ? ಇಸ್ಪೀಟ್ ಆಡಿ ಚಟ ತೀರಿಸಿಕೊಳ್ಳವ ಸಲುವಾಗಿ ಇಂತಹ ಪ್ರತಿಭಟನೆ ಮಾಡಲು ಮುಂದಾಗಿರಬಹುದು.

- ಸಿ.ಟಿ.ರವಿ, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News