ದೇಶದ ದಲಿತರ ಬಗ್ಗೆ ಮಾತನಾಡದೆ, ಪಾಕ್ ದಲಿತರ ಬಗ್ಗೆ ಕಣ್ಣೀರು ಸುರಿಸುತ್ತಿರುವುದು ಮೋದಿಯ ನಾಟಕ: ಸಿದ್ದರಾಮಯ್ಯ

Update: 2020-02-24 12:32 GMT

ಬೆಂಗಳೂರು, ಫೆ. 24: ‘ಜನವಿರೋಧಿ ನೀತಿಗಳಿಗೆ ಅಸಹಕಾರ ತೋರುವುದು ಸಾಂವಿಧಾನ ಬಾಹಿರವಲ್ಲ ಎಂದು ಮಹಾತ್ಮ ಗಾಂಧಿಯವರೇ ಹೇಳಿದ್ದಾರೆ. ಹಾಗಾಗಿ ದೇಶದ ಜನತೆ ಮತ್ತೊಮ್ಮೆ ಅಸಹಕಾರ ಚಳುವಳಿಗೆ ಸಿದ್ಧರಾಗಬೇಕಿದೆ. ಬಿಜೆಪಿಯ ಸಂವಿಧಾನ ವಿರೋಧಿ ಕಾನೂನಿಗೆ ಇದೇ ಸರಿಯಾದ ಉತ್ತರವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಅಸ್ಸಾಂನಲ್ಲಿ ನಡೆದ ಎನ್‌ಆರ್‌ಸಿಯಲ್ಲಿ 19 ಲಕ್ಷ ಜನ ತಮ್ಮ ಪೌರತ್ವ ಸಾಬೀತು ಪಡಿಸಲು ಸಾಧ್ಯವಾಗದೆ ಇಂದು ಬಂಧನ ಕೇಂದ್ರಗಳಲ್ಲಿ ದಿನ ಕಳೆಯುತ್ತಿದ್ದಾರೆ. ಇವರಲ್ಲಿ 14 ಲಕ್ಷ ಹಿಂದೂಗಳು. ಎನ್‌ಆರ್‌ಸಿ ದೇಶವ್ಯಾಪಿ ನಡೆದರೆ ಕೋಟಿ ಕೋಟಿ ಜನ ಈ ರೀತಿಯ ತ್ರಿಶಂಕು ಸ್ಥಿತಿಗೆ ಸಿಲುಕಲಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪಾಕಿಸ್ತಾನದಲ್ಲಿರುವ ಎಲ್ಲ ಹಿಂದೂಗಳಿಗೆ ಪೌರತ್ವ ನೀಡಲಿ. ಅದರ ಜೊತೆ ಭಾರತದ ಜೊತೆ ಕರುಳುಬಳ್ಳಿಯ ಸಂಬಂಧ ಇರುವ ಮುಸ್ಲಿಂ ಸಮುದಾಯವರಿಗೂ ಪೌರತ್ವ ನೀಡಲಿ. ಧಾರ್ಮಿಕ ದೌರ್ಜನ್ಯವನ್ನು ಪೂರ್ವಗ್ರಹದಿಂದ ಅಪವ್ಯಾಖ್ಯಾನ ಮಾಡಲಾಗಿದೆ. ಪಾಕಿಸ್ತಾನದಲ್ಲಿರುವ ಅಹ್ಮದೀಯ ಮತ್ತು ಶಿಯಾ ಮುಸ್ಲಿಮರು, ಶ್ರೀಲಂಕಾದ ತಮಿಳರು, ಮ್ಯಾನ್ಮಾರ್‌ನ ರೋಹಿಂಗ್ಯಾ ಮುಸ್ಲಿಮರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ’ ಎಂದು ಹೇಳಿದ್ದಾರೆ.

ದೇಶದ ಭವಿಷ್ಯಕ್ಕೆ ಮಾರಕ: ‘ಪ್ರಜಾಪ್ರಭುತ್ವ ವಿರೋಧಿ ಕಾರ್ಯಕ್ರಮಗಳನ್ನು ಜಾರಿಮಾಡುವುದು ವಾಜಪೇಯಿ ಕಾಲದಲ್ಲಿ ಬಿಜೆಪಿಯ ರಹಸ್ಯ ಅಜೆಂಡಾವಾಗಿತ್ತು, ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶವಿರೋಧಿ, ಜನವಿರೋಧಿ ಮತ್ತು ಸಂವಿಧಾನ ವಿರೋಧಿ ಅಜೆಂಡಾವನ್ನು ಜಾರಿಗೆ ತರಲು ಬಹಿರಂಗವಾಗಿ ತೊಡೆ ತಟ್ಟಿನಿಂತಿದ್ದಾರೆ. ಇದು ದೇಶದ ಭವಿಷ್ಯಕ್ಕೆ ಮಾರಕ’ ಎಂದು ಅವರು ಎಚ್ಚರಿಸಿದ್ದಾರೆ.

‘ವಿಶ್ವ ಸಂಚಾರ ಮಾಡುತ್ತಿರುವ ನರೇಂದ್ರ ಮೋದಿಯವರು ವಿಶ್ವಸಂಸ್ಥೆ ಸೇರಿದಂತೆ ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನದಲ್ಲಿ ನಡೆಯುತ್ತಿದೆಯೆನ್ನಲಾದ ಹಿಂದುಗಳ ಮೇಲಿನ ದೌರ್ಜನ್ಯದ ವಿಷಯವನ್ನು ಇಲ್ಲಿಯವರೆಗೆ ಯಾಕೆ ಎತ್ತಿಲ್ಲ ಎಂಬ ಪ್ರಶ್ನೆಯನ್ನು ಈಗ ಕೇಳಬೇಕಾಗಿದೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೋದಿ ಕಣ್ಣೀರು ಬರೀ ನಾಟಕ: ‘ದೇಶದಲ್ಲಿ ಪ್ರತಿ 2ಗಂಟೆಗೊಂದರಂತೆ ದಲಿತ ವ್ಯಕ್ತಿ ಕೊಲೆಯಾಗುತ್ತಿದೆ, ಪ್ರತಿ 3ಗಂಟೆಗೊಂದರಂತೆ ದಲಿತ ಮಹಿಳೆಯ ಮೇಲೆ ಅತ್ಯಾಚಾರವಾಗುತ್ತಿದೆ. ದೇಶದ ದಲಿತರ ದುಸ್ಥಿತಿ-ದೌರ್ಜನ್ಯದ ಬಗ್ಗೆ ಮಾತನಾಡದ ಪ್ರಧಾನಿ ಮೋದಿ, ಪಾಕಿಸ್ತಾನದ ದಲಿತರ ಬಗ್ಗೆ ಕಣ್ಣೀರು ಸುರಿಸುತ್ತಿರುವುದು ಬರೀ ನಾಟಕ’ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

‘ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ, ಬಡತನ, ಹಸಿವು, ನಿರುದ್ಯೋಗ, ಮಹಿಳಾ ದೌರ್ಜನ್ಯ, ರೈತರ ಆತ್ಮಹತ್ಯೆ ಇಂತಹ ಹಲವಾರು ಜ್ವಲಂತ ಸಮಸ್ಯೆಗಳು ದೇಶವನ್ನು ಬಾಧಿಸುತ್ತಿವೆ. ಇವೆಲ್ಲ ಸರಿಪಡಿಸುವುದು ಬಿಟ್ಟು ಸಿಎಎ-ಎನ್‌ಆರ್‌ಸಿ ಜಾರಿಗೆ ತರುವ ಹಿಂದಿನ ಉದ್ದೇಶವೇನು ಎಂದು ಅರ್ಥವಾಗದಷ್ಟು ಜನ ಮೂರ್ಖರಲ್ಲ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ನರೇಂದ್ರ ಮೋದಿಯವರ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಧಿಕ್ಕರಿಸಿಯೇ ನೀತಿ- ನಿರ್ಧಾರಗಳನ್ನು ಕೈಗೊಳ್ಳುತ್ತಾ ಬಂದಿದೆ. ಇದು ಮೂಲಭೂತವಾಗಿ ಭಾರತೀಯ ಜನತಾ ಪಕ್ಷ ಮತ್ತು ಅದರ ಹಿಂದಿರುವ ಸಂಘ ಪರಿವಾರದ ಅಜೆಂಡಾ ಆಗಿದೆ’ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

‘ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅಗಾಧವಾದ ಅವಕಾಶ ಇದೆ. ಅದರ ಬಗ್ಗೆ ಯೋಚನೆ ಮಾಡದೆ ಕ್ಯಾಸಿನೊ ಮೂಲಕ ಜೂಜಾಟದ ದುರ್ವ್ಯಸನ ಬೆಳೆಸಲು ಹೊರಟಿರುವ ಸರಕಾರ ಆರ್ಥಿಕವಾಗಿ ಮಾತ್ರ ಅಲ್ಲ ಬೌದ್ಧಿಕವಾಗಿಯೂ ದಿವಾಳಿಯಾಗಿದೆ. ಭಾರತೀಯ ಸಂಸ್ಕೃತಿ-ಸಂಸ್ಕಾರ ರಕ್ಷಣೆಗಾಗಿಯೇ ಹುಟ್ಟಿದವರಂತೆ ಮಾತನಾಡುವ ಸಚಿವ ಸಿ.ಟಿ.ರವಿ ಜೂಜಾಟ ಯಾವ ‘ಸಂಸ್ಕೃತಿ’ ಎನ್ನುವುದನ್ನು ಜನತೆಗೆ ತಿಳಿಸಬೇಕು’

-ಸಿದ್ದರಾಮಯ್ಯ, ವಿಪಕ್ಷ ನಾಯಕ

‘ಡೊನಾಲ್ಡ್ ಟ್ರಂಪ್‌ಗೆ ಇದು ಪ್ರಧಾನಿ ನರೇಂದ್ರ ಮೋದಿಯಿಂದ ಸ್ಫೂರ್ತಿ ಪಡೆಯುವ ಸಮಯ. ಜನಸಾಮಾನ್ಯರ ನೈಜ ಜೀವನದ ಸ್ಥಿತಿಯನ್ನು ಮರೆಮಾಚಲು ಆಲಂಕಾರಿಕ ಗೋಡೆಯನ್ನು ಹೇಗೆ ನಿರ್ಮಿಸಬೇಕು ಎಂಬುವುದನ್ನು ತಿಳಿಯಬೇಕಿದೆ’

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News