ಗೋವಾದಿಂದ ಮತ್ತೆ 'ಮಹಾದಾಯಿ' ತಕರಾರು: ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಕ್ರೋಶ

Update: 2020-02-24 12:51 GMT

ಬೆಂಗಳೂರು, ಫೆ.24: ಮಹಾದಾಯಿ ಜಲವಿವಾದ ನ್ಯಾಯಾಧೀಕರಣವು 2018ರ ಆ.14ರಂದು ನೀಡಿರುವ ಐತೀರ್ಪನ್ನು ಅನುಷ್ಠಾನಗೊಳಿಸಲು ಗೆಜೆಟ್ ಅಧಿಸೂಚನೆ ಹೊರಡಿಸುವ ಸುಪ್ರೀಂಕೋರ್ಟ್ ಆದೇಶಕ್ಕೆ ಮತ್ತೊಮ್ಮೆ ಗೋವಾ ಸರಕಾರ ತಕರಾರು ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ತಡೆ ಕೋರಿ ಎರಡು ಮೂರು ದಿನಗಳಲ್ಲಿ ಅರ್ಜಿ ಸಲ್ಲಿಸುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಕರ್ನಾಟಕಕ್ಕೆ ನ್ಯಾಯಾಲಯದ ಆದೇಶ ಉಲ್ಲಂಘಿಸುವ ಚಾಳಿ ಇದೆ ಎಂದು ಕಪೋಲಕಲ್ಪಿತ ಆರೋಪವನ್ನು ಮಾಡಿದ್ದಾರೆ ಎಂದು ಎಚ್.ಕೆ.ಪಾಟೀಲ್ ದೂರಿದ್ದಾರೆ.

ಮಹಾದಾಯಿ ನ್ಯಾಯಾಧೀಕರಣದ ಐತೀರ್ಪನ್ನು ಅನುಷ್ಠಾನಗೊಳಿಸಲು ಅಧಿಸೂಚನೆ ಹೊರಡಿಸಲು ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ಮೇಲೆ ಸುಪ್ರೀಂಕೋರ್ಟ್ ತನ್ನ ಆದೇಶ ಹೊರಡಿಸುವ ಮುನ್ನ, ಗೋವಾ ಮತ್ತು ಮಹಾರಾಷ್ಟ್ರ ಸರಕಾರಗಳು ಅಧಿಸೂಚನೆ ಪ್ರಕಟಿಸುವುದಕ್ಕೆ ಯಾವುದೇ ತಕರಾರು ಎತ್ತದಿರುವುದನ್ನು ಫೆ.20ರಂದು ಹೊರಡಿಸಿದ ತನ್ನ ಆದೇಶದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದ್ದಾರೆ.

ಮಹಾದಾಯಿ ನ್ಯಾಯಾಧೀಕರಣದ ಐತೀರ್ಪು ಅಧಿಸೂಚನೆಗೆ ಕರ್ನಾಟಕ ಸರಕಾರ ಯಾವುದೇ ಸಮಯ ವಿಳಂಬವಿಲ್ಲದೇ ಪ್ರಯತ್ನ ಮಾಡಬೇಕು. ಇನ್ನು ಎರಡು ಮೂರು ದಿನಗಳಲ್ಲಿ ಅಧಿಸೂಚನೆ ಪ್ರಕಟಗೊಳ್ಳುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ. ಕೇಂದ್ರ ಜಲಸಂಪನ್ಮೂಲ ಸಚಿವರ ಬಳಿ ಕರ್ನಾಟಕದ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಿ ತಕ್ಷಣ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಅಧಿಸೂಚನೆ ಪ್ರಕಟಿಸುವಂತೆ ಮಾಡಬೇಕು ಎಂದು ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.

ಇಷ್ಟೆ ಅಲ್ಲದೇ ರಾಜ್ಯದ ಪ್ರತಿಷ್ಠಿತ ಯೋಜನೆಯಾಗಿರುವ ಮಹಾದಾಯಿ ಯೋಜನೆಗೆ ಪ್ರಸ್ತುತ ಅಗತ್ಯವಿರುವ 2000 ಕೋಟಿ ರೂ.ಗಳ ಅನುದಾನವನ್ನು ಇದೇ ಮುಂಗಡ ಪತ್ರದಲ್ಲಿ ಘೋಷಣೆ ಮಾಡಬೇಕು. ಇದಲ್ಲದೇ ಸಾಕಷ್ಟು ಸಮಯ ವಿಳಂಬವಾಗಿರುವುದರಿಂದ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ನೀರಾವರಿ ಸಚಿವರಿಗೆ ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News