ದಾವಣಗೆರೆ: ಬಿಜೆಪಿ ಶಾಸಕನ ಮೊಮ್ಮಗನ ಕಾರು ಅಪಘಾತ

Update: 2020-02-24 13:16 GMT

ದಾವಣಗೆರೆ, ಫೆ.24: ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಅವರ ಮೊಮ್ಮಗ, ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯೆ ವೀಣಾ ನಂಜಪ್ಪ ಪುತ್ರ ಅರುಣ ಕುಮಾರ ಚಲಾಯಿಸುತ್ತಿದ್ದ ಇನ್ನೋವಾ ಕಾರು ಭಾನುವಾರ ತಡರಾತ್ರಿ ಶಾಮನೂರು ಬಳಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ಪಕ್ಕದ ಮನೆಯ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದ ಘಟನೆ ನಡೆದಿದೆ.

ಪವಾಡ ಸದೃಶ ರೀತಿಯಲ್ಲಿ ಕಾರಿನಲ್ಲಿದ್ದವರು ಮತ್ತು ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದವರ ಮೇಲೆ ಹಲ್ಲೆ ಮಾಡಲು ಅರುಣಕುಮಾರ ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

ಇದರಿಂದ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣಗೊಂಡಾಗ ಅರುಣ ಕುಮಾರ ಕಾರನ್ನು ಅಲ್ಲೇ ಬಿಟ್ಟು ತೆರಳಿದ್ದಾರೆ. ಕಾರಿನಲ್ಲಿ ಶಾಸಕರ ಪಾಸ್ ಇದೆ. ಶಾಸಕರನ್ನು ಮತ್ತು ಅರುಣ ಕುಮಾರ ಅವರನ್ನು ಸ್ಥಳಕ್ಕೆ ಕರೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಾಸಕರ ಸ್ಪಷ್ಟನೆ

ಶಾಬನೂರಿನಲ್ಲಿ ಅಪಘಾತವಾದ ವಾಹನ ನನ್ನದೇ ಆಗಿದ್ದು, ಟಯರ್ ಬ್ಲಾಸ್ಟ್ ಆಗಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ಶಾಸಕ ಎಸ್.ಎ.ರವೀಂದ್ರನಾಥ ಸ್ಪಷ್ಟಪಡಿಸಿದ್ದಾರೆ. 

ನನ್ನ ಮೊಮ್ಮಗನ ಮದುವೆ ಇದ್ದುದರಿಂದ ಸ್ನೇಹಿತರನ್ನು ಮದುವೆಗೆ ಆಹ್ವಾನಿಸಲು ಹೋಗಿದ್ದಾನೆ. ಅಲ್ಲದೇ, ಮಾರ್ವಾಡಿ ಸಮಾಜದವರ ಕಾರ್ಯಕ್ರಮಕ್ಕೂ ಹೋಗಿ, ವಾಪಾಸ್ ಮನೆಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದರು. 

ಅರುಣ ಪಾನಮತ್ತನಾಗಿ ವಾಹನ ಚಾಲನೆ ಮಾಡುತ್ತಿದ್ದ ಎಂಬುದಾಗಿ ಕೆಲವರು ಆರೋಪಿಸುತ್ತಿದ್ದಾರೆ. ಮಾರ್ವಾಡಿ ಸಮಾಜದ ಕಾರ್ಯಕ್ರಮದಲ್ಲಿ ಮದ್ಯ, ಮಾಂಸ ಸೇವನೆ ಇರುವುದಿಲ್ಲ. ಅಪಘಾತ ಆಗಿದ್ದಕ್ಕೆ ಮದ್ಯಪಾನ ಮಾಡಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಕಾರಿನ ಟೈಯರ್ ಬ್ಲಾಸ್ಟ್ ಆಗಿ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News