ಅಮೇರಿಕಾ ಅಧ್ಯಕ್ಷರ ಭಾರತ ಭೇಟಿಗೆ ವಿರೋಧ: ಹಾಸನದಲ್ಲಿ ಟ್ರಂಪ್-ಮೋದಿ ಪ್ರತಿಕೃತಿ ದಹಿಸಿ ಪ್ರತಿಭಟನೆ

Update: 2020-02-24 13:40 GMT

ಹಾಸನ, ಫೆ.24: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವಿರೋಧಿಸಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟಿಸಿ ಟ್ರಂಪ್-ಮೋದಿ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು.

'ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭಾರತಕ್ಕೆ ಆಹ್ವಾನಿಸಿ, ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮದ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುವುದನ್ನು ವಿರೋಧಿಸುತ್ತೇವೆ. ಈ ಒಪ್ಪಂದ ಜಾರಿಯಾದರೆ ಭಾರತಕ್ಕೆ ವಾರ್ಷಿಕ ಅಂದಾಜು 42,000 ಕೋಟಿ ರೂಪಾಯಿಗಳ ಹೈನು ಉತ್ಪನ್ನಗಳು, ಕೋಳಿ ಉತ್ಪನ್ನಗಳು, ಟರ್ಕಿ ಮತ್ತಿತರ ಕೃಷಿ ಉತ್ಪನ್ನಗಳ ವಸ್ತುಗಳು ಆಮದಾಗುತ್ತವೆ. ಸುಮಾರು ನೂರು ಮಿಲಿಯನ್ ಹೈನುಗಾರಿಕಾ ರೈತರು, ಅದರಲ್ಲೂ ಮಹಿಳೆಯರು ಮತ್ತು ಬಡ ರೈತರು ಸರ್ಕಾರದ ಈ ನಡೆಯಿಂದ ತೊಂದರೆಗೆ ಒಳಗಾಗುತ್ತಾರೆ ಎಂದು ಪ್ರತಿಭಟನಾಕಾರರು ದೂರಿದರು.

ಹೈನುಗಾರಿಕೆ ಮತ್ತು ಕುಕ್ಕಟ ಉದ್ಯಮದಲ್ಲಿ ತೊಡಗಿರುವ ಕಾರ್ಮಿಕರು ಕೂಡ ತಮ್ಮ ಜೀವನೋಪಾಯದಿಂದ ವಂಚಿತರಾಗುತ್ತಾರೆ. ಸೇಬು, ಚೆರ್ರಿ, ಬಾದಾಮಿ, ಸೋಯಾಬಿನ್, ಗೋಧಿ, ಜೋಳ ಮೊದಲಾದ ಹಣ್ಣು ಕಾಳುಗಳ ಮೇಲಿನ ಆಮದು ತೆರಿಗೆಯನ್ನು ಶೇಕಡ ನೂರರಿಂದ ಶೇಕಡ ಹತ್ತಕ್ಕಿಂತ ಕೆಳಕ್ಕೆ ಇಳಿಸಿದರೆ ನಮ್ಮ ದೇಶದ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ರೈತರ ಪ್ರತಿಭಟನೆಗಳಿಗೆ ಮಣಿದು ಆರ್‌ಸಿಇಪಿ ಒಪ್ಪಂದಕ್ಕೆ ನಾವು ಸಹಿ ಹಾಕಿಲ್ಲ ಎಂದು ಹೇಳಿಕೊಂಡ ಬಿಜೆಪಿ ಸರ್ಕಾರ ಈಗ ಈ ಹೊಸ ಒಪ್ಪಂದದ ಮೂಲಕ ಆರ್‌ಸಿಇಪಿ ಗಿಂತ ಆಘಾತಕಾರಿ ಪರಿಣಾಮವನ್ನು ಉಂಟುಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭಾರತದಲ್ಲಿ ಹೈನುಗಾರಿಕೆಯು ಸುಮಾರು ಹತ್ತು ಕೋಟಿ ರೈತಾಪಿ ಕುಟುಂಬಗಳಿಗೆ ಜೀವನೋಪಾಯವಾಗಿದೆ. ಅನೇಕ ವರ್ಷಗಳಿಂದ, ಸಹಕಾರಿ ಸಂಘದ ಮೂಲಕ ಕಟ್ಟಿ ಬೆಳೆಸಿದ ಹೈನುಗಾರಿಕೆ ಉದ್ಯಮದಲ್ಲಿ ಹಾಲಿನ ಬೆಲೆಯ ಶೇ.71 ರಷ್ಟು ಹಣ ರೈತಾಪಿ ಕುಟುಂಬಗಳಿಗೆ ವಾಪಸ್ಸಾಗುತ್ತಿತ್ತು. ಆದರೆ ಈಗ ಅಮೆರಿಕದ ಬೇಡಿಕೆಯಂತೆ ಹೈನುಗಾರಿಕೆ ಉತ್ಪನ್ನಗಳ ಆಮದಿನ ಮೇಲಿನ ಶೇಕಡ 64ರಷ್ಟು ತೆರಿಗೆಯನ್ನು ಕಡಿತಗೊಳಿಸಿದರೆ ಭಾರತದ ಹಾಲಿನ ಆಂತರಿಕ ಮಾರುಕಟ್ಟೆ ತೀವ್ರವಾಗಿ ನೆಲ ಕಚ್ಚುತ್ತದೆ. ಭಾರತದಲ್ಲಿ ಕುಕ್ಕುಟೋದ್ಯಮವು ಸುಮಾರು 48 ದಶಲಕ್ಷ ಜನರ ಜೀವನೋಪಾಯವಾಗಿದೆ. ಈ ವಲಯದ ಸಂಘಟಿತ ಮತ್ತು ಅಸಂಘಟಿತ ರೂಪದ ಆದಾಯ ಸುಮಾರು 80 ಸಾವಿರ ಕೋಟಿ ರೂಪಾಯಿ. ಈಗ ಅಮೆರಿಕಾದಿಂದ ಕಡಿಮೆ ದರದ ಕುಕ್ಕುಟ ಉತ್ಪನ್ನಗಳು ಭಾರತವನ್ನು ಪ್ರವೇಶಿಸುವುದು ಎಂದರೆ ಭಾರತದ ಆಂತರಿಕ ಕುಕ್ಕುಟ ಮಾರುಕಟ್ಟೆಗೆ ಮರಣ ಶಾಸನ ಬರೆದಂತೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಅಮೆರಿಕದ ತೀವ್ರ ಒತ್ತಡಕ್ಕೆ ಒಳಗಾಗಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಶೇಕಡ 85ರಷ್ಟು ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಹಾಗೂ ಕೃಷಿ ಕೂಲಿಕಾರರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಚುನಾವಣಾ ವರ್ಷದಲ್ಲಿ ಇರುವ ಟ್ರಂಪ್ ಅವರು ಅಮೆರಿಕದಲ್ಲಿ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಕೃಷಿ ಉತ್ಪನ್ನಗಳ ರಫ್ತಿಗೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ ಎಂದು ದೂರಿದರು. ಬಿಜೆಪಿ ಸರ್ಕಾರದ ಈ ನಡೆಯನ್ನು ಹಿಂತೆಗೆಯುವಂತೆ ಒತ್ತಾಯಿಸಿ, ರೈತರು, ಕಾರ್ಮಿಕರು ದೇಶಾದ್ಯಂತ ಭೂತ ದಹನ, ಪ್ರತಿಭಟನಾ ಪ್ರದರ್ಶನಗಳನ್ನು ಮಾಡುತ್ತಿರುವುದಾಗಿ ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಹೆಚ್.ಆರ್. ನವೀನ್ ಕುಮಾರ್, ಫೃಥ್ವಿ, ಅರವಿಂದ್, ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಶ್ಶಿರ್ ಅಹಮದ್ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News