ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ರಾಜ್ಯ ಸರಕಾರ ನಿರ್ಧಾರ: ಷರತ್ತು ಹೀಗಿದೆ...

Update: 2020-02-24 14:55 GMT

ಬೆಂಗಳೂರು, ಫೆ. 24: ಸಹಕಾರಿ ಬ್ಯಾಂಕುಗಳಿಂದ ಮಾಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ ಪಡೆದಿರುವ ರೈತರು ಮಾರ್ಚ್ 31ರೊಳಗೆ ಅಸಲನ್ನು ಪಾವತಿಸಿದರೆ ಬಡ್ಡಿ ಮನ್ನಾಕ್ಕೆ ರಾಜ್ಯ ಸರಕಾರ ತೀರ್ಮಾನಿಸಿದೆ.

ಮಾ.31ರ ಅಂತ್ಯಕ್ಕೆ 92,525 ರೈತರ ಅಂದಾಜು 560 ಕೋಟಿ ರೂ.ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ಸುಸ್ತಿಯಾಗಿದೆ. ಇದರ ಮೇಲಿನ ಬಡ್ಡಿ ಮೊತ್ತ ಅಂದಾಜು 446 ಕೋಟಿ ರೂ.ಗಳಾಗಲಿದೆ ಎಂದು ರಾಜ್ಯ ಸರಕಾರ ಅಂದಾಜು ಮಾಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಯೋಜನೆಯಡಿ 2004ರ ಎ.1ಕ್ಕಿಂತ ಹಿಂದಿನ ಅವಧಿಯ ಸಾಲವಾಗಿದ್ದರೆ ಬಡ್ಡಿ ಪಾವತಿಸಲು ಬಾಕಿ ಇದ್ದ ದಿನಾಂಕದಿಂದ ಸಾಲ ಮರುಪಾವತಿ ದಿನಾಂಕದ ವರೆಗೆ ಸಾಲಗಳಿಗೆ ನಿಗದಿ ಮಾಡಲಾಗಿರುವ ಬಡ್ಡಿ ದರ ಅಥವಾ ಶೇ.12ರ ಬಡ್ಡಿ ದರದಲ್ಲಿ ಯಾವುದು ಕಡಿಮೆ ಅಂತಹ ಬಡ್ಡಿ ಆಧಾರದಲ್ಲಿ ಸರಕಾರದ ವತಿಯಿಂದ ಬಡ್ಡಿ ಸಹಾಯಧನ ಭರಿಸಲಾಗುವುದು.

ರಾಜ್ಯದಲ್ಲಿ ನೆರೆ ಮತ್ತು ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಹಕಾರ ಬ್ಯಾಂಕುಗಳಿಂದ ಪಡೆದ ಸಾಲ ಮರುಪಾವತಿಸಲು ಸಾಧ್ಯವಾಗದೆ ಪುನಃ ರೈತರಿಗೆ ಹೊಸ ಸಾಲ ನೀಡಲು ತೊಂದರೆ ಆಗದಂತೆ ಸರಕಾರ ಈ ಕ್ರಮವನ್ನು ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News