'ಮಂಗಳೂರು ಗೋಲಿಬಾರ್' ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ: ಹೈಕೋರ್ಟ್‌ಗೆ ಸರಕಾರದ ಹೇಳಿಕೆ

Update: 2020-02-24 14:44 GMT
File Photo

ಬೆಂಗಳೂರು, ಫೆ.24: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ 2019ರ ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ಸಂಭವಿಸಿ ಪೊಲೀಸ್ ಗೋಲಿಬಾರ್ ನಡೆದ ಘಟನೆ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ. 

ಈ ಕುರಿತು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹಾಗೂ ಮಂಗಳೂರು ಮಾಜಿ ಮೇಯರ್ ಕೆ.ಅಶ್ರಫ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ವಾದಿಸಿ, ಮಂಗಳೂರಿನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಿಸಿ, 70ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆ ಪಡೆಯಲಾಗಿದ್ದು, ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಪ್ರಕರಣ ದಾಖಲಿಸಿರುವ ವಿಚಾರದಲ್ಲಿ ಪೊಲೀಸರು ತಮ್ಮ ವಿರುದ್ಧ ಸುಳ್ಳು ದೂರು ನೀಡಿದ್ದಾರೆ ಎಂದು ಯಾಕೆ ಹಿಂಬರಹ ಬರೆದಿದ್ದಾರೆ. ತನಿಖೆಯ ಮೊದಲೇ ಹಿಂಬರಹವನ್ನು ಬರೆಯಲು ಬರುವುದಿಲ್ಲವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠವು ಪೊಲೀಸರ ಹಿಂಬರಹವನ್ನು ವಾಪಸ್ ಪಡೆಯಲು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

ಘಟನೆಯ ತನಿಖೆಗೆ ಎಡಿಜಿಪಿ ದರ್ಜೆ ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು. ಘಟನೆಯಲ್ಲಿ ಗಾಯಗೊಂಡವರು ಹಾಗೂ ಮೃತರ ಕುಟುಂಬದವರು ನೀಡಿರುವ ಎಲ್ಲ ದೂರುಗಳಿಗೆ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಬೇಕು. ಅಲ್ಲದೇ ಘಟನೆ ನಡೆದ 2019ರ ಡಿ.19ರ ಬೆಳಗ್ಗೆ 10 ಗಂಟೆಯಿಂದ ಡಿ.20ರ ಮಧ್ಯಾಹ್ನ 1 ಗಂಟೆವರೆಗೆ ಪೊಲೀಸರು, ಸ್ಥಳೀಯ ಆಡಳಿತ ಹಾಗೂ ಖಾಸಗಿ ಅಂಗಡಿ ಮಾಲಕರು ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಸಂರಕ್ಷಿಸಿಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ, ಉಡುಪಿ ಜಿಲ್ಲಾಧಿಕಾರಿ ಜಗದೀಶ್, ಸಿಐಡಿ ಎಸ್ಪಿ ಅವರು ನ್ಯಾಯಪೀಠದ ಮುಂದೆ ಖುದ್ದು ಹಾಜರಾಗಿದ್ದರು.

ಅರ್ಜಿದಾರರ ಪರವಾಗಿ ವಕೀಲ ಬಿ.ಎನ್.ಜಗದೀಶ್ ಅವರು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News