ಟ್ರಂಪ್ ಭಾರತ ಭೇಟಿ ವಿರೋಧಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆ: ಪ್ರತಿಕೃತಿ ದಹಿಸಿ ಆಕ್ರೋಶ

Update: 2020-02-24 16:38 GMT
ಮಂಡ್ಯ

ಮೈಸೂರು,ಫೆ.24: ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ವಿರೋಧಿಸಿ ರಾಜ್ಯದ ಹಲವೆಡೆ ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು. ಮೈಸೂರಿನಲ್ಲಿ 'ಟ್ರಂಪ್ ಗೋ ಬ್ಯಾಕ್' ಎಂದು ಘೋಷಣೆ ಕೂಗಿ ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರಿನಲ್ಲಿ ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 

ಅಲ್ಲದೇ, ಹಾಸನದಲ್ಲಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟಿಸಿ ಟ್ರಂಪ್-ಮೋದಿ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ‘ಫ್ಯಾಸಿಸ್ಟ್ ಟ್ರಂಪ್ ಗೋ ಬ್ಯಾಕ್’ ಘೋಷಣೆಯಡಿ ಮಂಡ್ಯದ ಮಳವಳ್ಳಿಯಲ್ಲಿ ಕರ್ನಾಟಕ ರಾಜ್ಯ ಪ್ರಾಂತ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ಕೆ.ಎಂ.ದೊಡ್ಡಿಯಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಟ್ರಂಪ್ ಪ್ರತಿಕೃತಿ ದಹಿಸಿದರು.

ಮೈಸೂರು: ನಗರದ ಗಾಂಧಿ ವೃತ್ತದ ಬಳಿ ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಟ್ರಂಪ್ ಎರಡು ದಿನಗಳ ಭೇಟಿಗಾಗಿ 100 ಕೋಟಿ ರೂ. ಗೂ ಹೆಚ್ಚು ಖರ್ಚು ಮಾಡಲಾಗುತ್ತಿದೆ. ಅವರು ಸಾಗುವ ದಾರಿಯಲ್ಲಿರುವ ಕೊಳಗೇರಿಗಳು ಕಾಣದಂತೆ ಗೋಡೆ ಕಟ್ಟಲಾಗಿದ್ದು, ಇದು ನಾಚಿಕೆಗೇಡಿನ ಕೆಲಸ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಿ.ರವಿ, ಚಂದ್ರಶೇಖರ ಮೇಟಿ, ಚಂದ್ರಕಲಾ, ಸುಮ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

ಬೆಂಗಳೂರು: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ಖಂಡಿಸಿ ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್ ಪಕ್ಷದ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ನಗರದ ಮೌರ್ಯ ವೃತ್ತದ ಬಳಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು, ಸರ್ವಾಧಿಕಾರಿ ಧೋರಣೆಯುಳ್ಳ ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತ ಭೇಟಿ ಖಂಡನಾರ್ಹ. ಕೂಡಲೇ ಟ್ರಂಪ್ ಭಾರತ ಬಿಟ್ಟು ತೊಲಗಲಿ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ಮುಖಂಡ ಟಿ.ಎಸ್.ಸುನೀತ್ ಕುಮಾರ್, ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಮೋದಿ ಭಾರತ ಭೇಟಿಗೆ ಬಂದಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದರು.

ಅಮೆರಿಕಾ ಅಧ್ಯಕ್ಷರ ಭಾರತ ಭೇಟಿಯ ಸಿದ್ಧತೆ ಮಾಡಿಕೊಳ್ಳುವ ಭರದಲ್ಲಿ ವಾಸ್ತವ ಕಾಣದಂತೆ ಮರೆಮಾಚಲು ಸರಕಾರ ಸಾಕಷ್ಟು ಶ್ರಮಿಸಿದೆ. ಕೊಳಚೆ ಪ್ರದೇಶಗಳು ಕಾಣದಂತೆ ದೊಡ್ಡ ದೊಡ್ಡ ಗೋಡೆಗಳನ್ನು ಕಟ್ಟಲಾಗಿದೆ. ಇದಕ್ಕೆ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿರುವುದು ದುರಂತ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಟ್ರಂಪ್ ಪ್ರತಿಕೃತಿ ದಹನ

ಮಂಡ್ಯ: ಟ್ರಂಪ್ ಭಾರತ ಭೇಟಿಯನ್ನು ವಿರೋಧಿಸಿ ‘ಫ್ಯಾಸಿಸ್ಟ್ ಟ್ರಂಪ್ ಗೋ ಬ್ಯಾಕ್’  ಘೋಷಣೆಯಡಿ ಸೋಮವಾರ ಮಳವಳ್ಳಿಯಲ್ಲಿ ಕರ್ನಾಟಕ ರಾಜ್ಯ ಪ್ರಾಂತ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ಕೆ.ಎಂ.ದೊಡ್ಡಿಯಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಟ್ರಂಪ್ ಪ್ರತಿಕೃತಿ ದಹಿಸಿದರು.

ಮಳವಳ್ಳಿ ಪ್ರತಿಭಟನೆ ವೇಳೆ ಮಾತನಾಡಿದ ಮುಖಂಡರು, ಹೈನುಗಾರಿಕೆ, ಕೋಳಿ ಉದ್ಯಮವನ್ನು ಭಾರತದಲ್ಲಿ ವಿಸ್ತರಿಸಲು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದಾರೆ ಆರೋಪಿಸಿದರು.

ಅಮೆರಿಕಾದ ಹಾಲು, ಚಿಕನ್ ನಮಗೆ ಬೇಕಾಗಿಲ್ಲ. ಭಾರತದಲ್ಲಿ ರೈತರು ದಿವಾಳಿಯಾಗಲು ಬಿಡುವುದಿಲ್ಲ. ಲೂಟಿಕೋರರಿಗೆ ಭಾರತ ಮಾರಾಟಕ್ಕಿಲ್ಲ. ರೈತವಿರೋಧಿ ಮೋದಿ ಸರಕಾರಕ್ಕೆ ಧಿಕ್ಕಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಭಾರತದ ಕುಕ್ಕಟೋಧ್ಯಮ ಮತ್ತು ಹೈನುಗಾರಿಕೆಯನ್ನು ವಶಕ್ಕೆ ಪಡೆಯಲು ಟ್ರಂಪ್ ಯೋಜಿಸಿದ್ದಾರೆ. ಈ ಒಪ್ಪಂದ ಜಾರಿಯಾದರೆ ಭಾರತಕ್ಕೆ  ವಾರ್ಷಿಕ ಅಂದಾಜು 42,000 ಕೋಟಿ ರೂ.ಗಳ ಹೈನು ಉತ್ಪನ್ನಗಳು, ಕೋಳಿ ಉತ್ಪನ್ನಗಳು, ಮತ್ತಿತರ ಕೃಷಿ ಉತ್ಪನ್ನಗಳ ವಸ್ತುಗಳು ಆಮದಾಗುತ್ತವೆ ಎಂದು ಅವರು ಹೇಳಿದರು.

ಮಳವಳ್ಳಿ ಪ್ರತಿಭಟನೆಯಲ್ಲಿ ಪ್ರಾತ ರೈತ ಸಂಘದ ಅಧ್ಯಕ್ಷ ಎನ್.ಎಲ್.ಭರತ್‍ ರಾಜ್, ಕಾರ್ಯದರ್ಶಿ ಎನ್.ಲಿಂಗರಾಜ ಮೂರ್ತಿ, ಮಹದೇವು, ಅನಿಲ್, ಮನು, ಡೇವಿಡ್, ಚಂದ್ರು, ಸಿದ್ದರಾಜು, ರೈತ ಸಂಘದ ಅಧ್ಯಕ್ಷ ದೇವರಾಜ್, ಕಾರ್ಯದರ್ಶಿ ಬಸವರಾಜ್, ಸಿದ್ದೇಗೌಡ, ನಾಗರಾಜು, ಸಣ್ಣಶೆಟ್ಟಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ದೇವಿ, ಸುಶೀಲ, ಚನ್ನಾಜಮ್ಮ ಭಾಗವಹಿಸಿದ್ದರು.

ಕೆ.ಎಂ.ದೊಡ್ಡಿಯ ಪ್ರತಿಭಟನೆಯಲ್ಲಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ನಿತ್ಯಾನಂದ, ಜಿಲ್ಲಾ ಕಾರ್ಯದರ್ಶಿ ಎಂ.ಪುಟ್ಟಮಾದು, ಟಿ.ಯಶ್ವಂತ್, ಸಿ.ಕುಮಾರಿ, ಸೌಭಾಗ್ಯ, ಜ್ಯೋತಿ, ಮಹದೇವಮ್ಮ, ಬಿ.ಹನುಮೇಶ್, ಸುರೇಂದ್ರ, ಶುಭಾವತಿ, ಶೋಭಾ, ಕೆ.ಬಸವರಾಜು, ಬಿ.ಸಿದ್ದರಾಜು, ಎಚ್.ಸಿ.ನಾಗರಾಜು, ಅಜಯ್, ಶೋಭಾ, ಆನಂದ್, ಇತರರು ಪಾಲ್ಗೊಂಡಿದ್ದರು.

ಹಾಸನ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವಿರೋಧಿಸಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟಿಸಿ ಟ್ರಂಪ್-ಮೋದಿ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಹೆಚ್.ಆರ್. ನವೀನ್ ಕುಮಾರ್, ಫೃಥ್ವಿ, ಅರವಿಂದ್, ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಶ್ಶಿರ್ ಅಹಮದ್ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News