ಟ್ರಂಪ್ ಭೇಟಿಯಿಂದ ದೇಶಕ್ಕೆ ಲಾಭವಿಲ್ಲ: ಮಲ್ಲಿಕಾರ್ಜುನ ಖರ್ಗೆ

Update: 2020-02-24 17:23 GMT

ಕಲಬುರ್ಗಿ, ಫೆ. 24: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯಿಂದ ನಮಗೆ ಯಾವುದೇ ಲಾಭವಿಲ್ಲ. ನಮಗೆ ಅಗತ್ಯವಿರುವ ವಿಷಯಗಳ ಬಗ್ಗೆ ಟ್ರಂಪ್ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಲೋಕಸಭೆ ಕಾಂಗ್ರೆಸ್ ಮಾಜಿ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ದೂರಿದ್ದಾರೆ.

ಸೋಮವಾರ ನಗದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಮ್ಮ ದೇಶಕ್ಕೆ ಅತ್ಯವಿರುವ ಪೆಟ್ರೋಲ್, ಡಿಸೇಲ್, ಭಾರತೀಯ ಉದ್ಯೋಗಿಗಳಿಗೆ ಎಚ್ 1 ಬಿ ವೀಸಾ ನೀಡುವ ವ್ಯವಸ್ಥೆಯನ್ನು ಸರಳೀಕರಣ ಕುರಿತೂ ಟ್ರಂಪ್ ಅವರು ಮಾತನಾಡಲಿಲ್ಲ ಎಂದು ಹೇಳಿದರು.

ದೇಶಕ್ಕೆ ಅಗತ್ಯವಿರುವ ಗಂಭೀರ ವಿಷಯಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ವೈಯಕ್ತಿಕ ಸ್ನೇಹಿತರು ಎನ್ನುವ ಕಾರಣಕ್ಕೆ ಭಾರತಕ್ಕೆ ಬಂದಿದ್ದೇನೆ ಎನ್ನುತ್ತಾರೆ. ವೈಯಕ್ತಿಕ ಸ್ನೇಹಿತರು ಎನ್ನುವದಾದರೆ, ಮನೆಗೆ ಕರೆದುಕೊಂಡು ಹೋಗಬೇಕಿತ್ತು. ಹೀಗೆ ಸರಕಾರದ ಕೋಟ್ಯಾಂತರ ರೂ.ಖರ್ಚು ಮಾಡುವ ಅಗತ್ಯವೇನಿತ್ತು ಎಂದು ಖರ್ಗೆ ಪ್ರಶ್ನಿಸಿದರು.

ಟ್ರಂಪ್ ಸ್ವಾಗತದ ಹಿನ್ನೆಲೆಯಲ್ಲಿ ಕೊಳಚೆ ಪ್ರದೇಶ ಕಾಣದಂತೆ ಗೋಡೆ ನಿರ್ಮಿಸಲಾಗಿದೆ. ಲಕ್ಷಾಂತರ ಜನರಿಗೆ ತೊಂದರೆ ನೀಡಲಾಗಿದೆ. ಗೋಡೆ ನಿರ್ಮಿಸಿ ಬಡತನ ಮುಚ್ಚಿಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಟ್ರಂಪ್ ಚುನಾವಣಾ ಪ್ರಚಾರ ಭಾರತದಲ್ಲಿ ನಡೆಯುತ್ತಿದೆಯೇ ಎಂಬ ಸಂಶಯ ಸೃಷ್ಟಿಸಿದೆ ಎಂದು ಟೀಕಿಸಿದರು.

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ದೇಶಕ್ಕೆ ಬರುವುದು ಬೇಡ ಎಂದು ಹೇಳುವುದಿಲ್ಲ. ಆದರೆ, ಈ ಭೇಟಿಯಿಂದ ದೇಶದ ಜನರಿಗೆ ಅನುಕೂಲ ಆಗಬೇಕಿತ್ತು. ಆ ನಿಟ್ಟಿನಲ್ಲಿ ಪ್ರಮುಖ ಒಪ್ಪಂದಗಳಾಗಬೇಕಿತ್ತು ಎಂದು ಖರ್ಗೆ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.

ಅಸಮಾಧಾನ: ಹದಿನೈದನೆ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ ರಾಜ್ಯಕ್ಕೆ ಅನುದಾನ ಕಡಿತ ಸರಿಯಲ್ಲ. ನ್ಯಾಯಯುತವಾಗಿ ಕರ್ನಾಟಕ ರಾಜ್ಯಕ್ಕೆ ಬರಬೇಕಾದ ಪಾಲು ಸಿಗಬೇಕೆಂದು ಆಗ್ರಹಿಸಿದ ಅವರು, ಕೇಂದ್ರದಿಂದ ಅನುದಾನ ತರುವುದನ್ನು ಬಿಟ್ಟು ಟ್ರಂಪ್ ಜಪದಿಂದ ಪ್ರಯೋಜನವಿಲ್ಲ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News