ದೇಶದ ಸಂಪತ್ತನ್ನೇ ಮಾರಿ ಟ್ರಂಪ್‍ ಅನ್ನು ಮೋದಿ ಖುಷಿ ಪಡಿಸುತ್ತಿದ್ದಾರೆ: ಸೀತಾರಾಮ್ ಯೆಚೂರಿ

Update: 2020-02-24 17:26 GMT

ವಿಜಯಪುರ: ಇಡೀ ದೇಶದ ಸಂಪತ್ತನ್ನೇ ಮಾರಿ ಟ್ರಂಪ್‍ಗೆ ಖುಷಿ ಪಡಿಸುವ ಕಾರ್ಯದಲ್ಲಿ ಮೋದಿ ತೊಡಗಿಸಿಕೊಂಡಿದ್ದಾರೆ. ಗೋವಿನ ಹಾಲನ್ನು ಬದಿಗೊತ್ತಿ ಅಮೇರಿಕದ ಹಾಲು ಉತ್ಪಾದಕ ಕಂಪನಿಗಳಿಗೆ ಇಲ್ಲಿ ಮಾರುಕಟ್ಟೆ ಸ್ಥಾಪಿಸುವ ಒಡಂಬಡಿಕೆ ಮಾಡಿಕೊಂಡಿರುವುದು ಯಾವ ರೀತಿಯ ಗೋ ಸೇವೆ ಎಂದು ಸಿಪಿಐ ಹಿರಿಯ ಮುಖಂಡ ಸೀತಾರಾಮ್ ಯೆಚೂರಿ ಖಾರವಾಗಿ ಪ್ರಶ್ನಿಸಿದರು. 

ವಿಜಯಪುರದ ಕೊಲ್ಹಾರ ರಸ್ತೆ ಜುಮನಾಳ ಕ್ರಾಸ್ ಬಳಿ ಬಿಜಾಪುರ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಸೋಮವಾರ ನಡೆದ 'ಸಂವಿಧಾನ ಉಳಿಸಿ' ಆಂದೋಲನ ಉದ್ದೇಶಿಸಿ ಮಾತನಾಡಿದ ಅವರು, ಅಮೇರಿಕದ ಅನೇಕ ಕಂಪನಿಗಳಿಗೆ ಈ ದೇಶದಲ್ಲಿ ಬಾಗಿಲು ತೆಗೆಯುವ ನಿಟ್ಟಿನಲ್ಲಿ ಮುಕ್ತ ವ್ಯಾಪಾರ ಒಪ್ಪಂದದ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ, ಅದರಲ್ಲೂ ಪ್ರಮುಖವಾಗಿ ಅಮೇರಿಕದ ಡೈರಿ ಉದ್ಯಮ ಈ ಭಾಗದಲ್ಲಿ ನೆಲೆಗೊಳ್ಳುವ ನಿಟ್ಟಿನಲ್ಲಿಯೂ ಮೋದಿ ಸರ್ಕಾರ ಅತ್ಯಾಸಕ್ತಿ ಹೊಂದಿದೆ. ಇದರಿಂದಾಗಿ ದೇಶಿ ಗೋವಿನ ಹಾಲು ಎಲ್ಲಿ ಹೋಗಬೇಕು? ಇದು ಯಾವ ರೀತಿಯ ಗೋ ಸೇವೆ ಎಂದು ಪ್ರಶ್ನಿಸಿದರು. 

ದೇಶವನ್ನು ಮಾರಿ ಟ್ರಂಪ್‍ಗೆ ಖುಷಿ ಪಡಿಸುವ ಕಾರ್ಯದಲ್ಲಿ ಮೋದಿ ತೊಡಗಿಸಿಕೊಂಡಿದ್ದಾರೆ. ದೇಶದ ಸಂಪತ್ತು ಲೂಟಿ ನಿತ್ಯನಿರಂತರವಾಗಿದೆ. ಉದ್ಯೋಗಗಳು ಕಡಿತಗೊಳ್ಳುತ್ತಿವೆ. ಅನೇಕ ಕಾರ್ಖಾನೆ, ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ದೇಶವನ್ನು ಹಾಗೂ ದೇಶದ ಸಂವಿಧಾನವನ್ನು ಉಳಿಸಿದಾಗ ಮಾತ್ರ ಸಮೃದ್ಧ ಭಾರತ ರೂಪುಗೊಳ್ಳಲು ಸಾಧ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News