ಬಿಜೆಪಿ ಶಾಸಕರು ಪಕ್ಷ ತೊರೆಯಲು ತುದಿಗಾಲಲ್ಲಿ ನಿಂತಿದ್ದಾರೆ: ಸಿದ್ದರಾಮಯ್ಯ

Update: 2020-02-24 17:53 GMT

ಕಲಬುರಗಿ, ಫೆ.24: ರಾಜ್ಯ ಬಿಜೆಪಿ ಸರಕಾರದ ಶಾಸಕರಿಗೆ ಸಚಿವ ಸ್ಥಾನ ಸಿಗಲಿಲ್ಲವೆಂದು ಅಸಮಾಧಾನ ಶುರುವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಇಂದು ಕಲಬುರಗಿಗೆ ಆಗಮಿಸಿ ಮಾಧ್ಯಮರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಯಾವಾಗ ಬೇಕಾದರೂ ಅಸಮಾಧಾನ ಸ್ಫೋಟಗೊಳ್ಳಬಹುದು. ಇದು ಬಿಜೆಪಿ ನಾಯಕರಲ್ಲಿ ತಳಮಳ ಸೃಷ್ಟಿಸಿದೆ. ಕೆಲ ಶಾಸಕರು ಬಿಜೆಪಿ ತೊರೆದು ಬೇರೆ ಪಕ್ಷ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಬಿಜೆಪಿ ಶಾಸಕರು ಪಕ್ಷ ಬಿಟ್ಟು ಬರುವುದರಿಂದ ಕಾಂಗ್ರೆಸ್ ಗೆ ಏನೂ ಲಾಭವಿಲ್ಲವಾದರೂ ಬಿಜೆಪಿಗೆ ನಷ್ಟವಾಗೋದು ಖಚಿತ ಎಂದು ತಿಳಿಸಿದರು.

ಬಿಜೆಪಿಯ 32 ಶಾಸಕರು ಕಾಂಗ್ರೆಸ್ ಗೆ ಬರುತ್ತಾರೆ ಎಂಬ ಮಾತನ್ನು ಮಾಜಿ ಸಚಿವ ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೂ ಗೊತ್ತಿಲ್ಲ. ಅವರ ಹೇಳಿಕೆ ಸತ್ಯವೂ ಆಗಬಹುದು ಅಥವಾ ಆಗದೇ ಇರಬಹುದು ಎಂದು ಸಿ.ಎಂ.ಇಬ್ರಾಹಿಂ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಟ್ರಂಪ್ ಆಗಮನದಿಂದ ಏನೂ ಲಾಭ ಇಲ್ಲ: ಒಂದು ದೇಶದ ಅಧ್ಯಕ್ಷ ಬರುತ್ತಿದ್ದಾರೆ. ಅವರನ್ನು ಸ್ವಾಗತ ಮಾಡುತ್ತಿದ್ದಾರೆ. ಒಳ್ಳೆಯ ಸ್ವಾಗತ ಮಾಡುವುದು ನಮ್ಮ ಕರ್ತವ್ಯ. ಆದರೆ ಅಗತ್ಯಕ್ಕಿಂತ ಆಡಂಬರ ಹೆಚ್ಚಾಗಿದೆ. ಕೇಂದ್ರ ಸರಕಾರ ಯಾವುದೇ ಆಮದು ಒಪ್ಪಂದಕ್ಕೆ ಮುಂದಾಗಬಾರದು ಎಂದು ಆಗ್ರಹಿಸಿದರು.

15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಈ ವರ್ಷ ಒಂಬತ್ತು ಸಾವಿರ ಕೋಟಿ ಕಡಿಮೆಯಾಗಿದ್ದು, ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ. ಮುಂದಿನ ವರ್ಷ 11,258 ಕೋಟಿ ಕಡಿಮೆಯಾಗಲಿದೆ. 5 ವರ್ಷದಲ್ಲಿ ರಾಜ್ಯಕ್ಕೆ ಸುಮಾರ 60 ಸಾವಿರ ಕೋಟಿ ರೂಪಾಯಿ ಅನುದಾನ ನಷ್ಟವಾಗಲಿದೆ. ಯಡಿಯೂರಪ್ಪ ಮತ್ತು ಇಪ್ಪತ್ತೈದು ಜನ ಎಂಪಿಗಳು ಏನು ಮಾಡ್ತಿದ್ದಾರೆ? ಇದರ ಬಗ್ಗೆ ಯಾರದರೂ ಧ್ವನಿ ಎತ್ತುತ್ತಿದ್ದಾರಾ? ಪ್ರವಾಹ ಬಂದಾಗಲೂ ಹೆಚ್ಚಿನ ಪರಿಹಾರ ನೀಡಲಿಲ್ಲ. ಯಡಿಯೂರಪ್ಪ ನಿಯೋಗ ಕರೆದುಕೊಂಡು ಹೋಗಲಿಲ್ಲ. ಮೋದಿ ಮತ್ತು ಅಮಿತ್ ಶಾ ಅವರಿಗೆ ಯಡಿಯೂರಪ್ಪ ಹೆದರುತ್ತಿದ್ದಾರೆ. ಯಡಿಯೂರಪ್ಪ ವೀಕೆಸ್ಟ್ ಮುಖ್ಯಮಂತ್ರಿ. ಇವರಿಂದ ಏನೂ ಮಾಡಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News