ಬೇಡಿಕೆ ಈಡೇರಿಸುವ ಭರವಸೆ: 8 ದಿನಗಳ ಸಹಕಾರಿ ಸಾರಿಗೆ ಕಾರ್ಮಿಕರ ಮುಷ್ಕರಕ್ಕೆ ತಾತ್ಕಾಲಿಕ ಬ್ರೇಕ್

Update: 2020-02-24 18:13 GMT

ಚಿಕ್ಕಮಗಳೂರು, ಫೆ.24: ಜಿಲ್ಲೆಯ ಹೆಮ್ಮೆಯ ಸಾರಿಗೆ ಸಂಸ್ಥೆಯಾಗಿದ್ದ ಸಹಕಾರಿ ಸಾರಿಗೆ ಸಂಸ್ಥೆಯನ್ನು ಸ್ಥಗಿತಗೊಳಿಸಿ ಕಳೆದ 8 ದಿನಗಳಿಂದ ಕೊಪ್ಪ ಪಟ್ಟಣದ ತಾಲೂಕು ಕಚೇರಿ ಎದುರು ಸರಕಾರದ ನೆರವಿಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದ ಕಾರ್ಮಿಕರು ಮಾಜಿ ಸಚಿವ ಡಿ.ಎನ್.ಜೀವರಾಜ್ ಅವರ ಮನವೊಲಿಕೆ ಹಿನ್ನೆಲೆಯಲ್ಲಿ ಸೋಮವಾರ ಧರಣಿಯನ್ನು ಕೈಬಿಟ್ಟಿದ್ದಾರೆ.

ಕಾರ್ಮಿಕರೇ ಮಾಲಕರಾಗಿರುವ ಸಹಕಾರಿ ಸಾರಿಗೆ ಸಂಸ್ಥೆಯು ಸರಕಾರದ ಅಸಹಕಾರ ಹಾಗೂ ಆರ್ಥಿಕ ನೆರವು ನೀಡದಿದ್ದ ಪರಿಣಾಮ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಳೆದ 8 ದಿನಗಳ ಹಿಂದೆ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಸಾರಿಗೆ ಬಸ್‍ಗಳ ಓಡಾಟವನ್ನು ಸ್ಥಗಿತಗೊಳಿಸಿತ್ತು. ಇದರಿಂದಾಗಿ ಸಂಸ್ಥೆಯ ಕಾರ್ಮಿಕರು ಸರಕಾರದ ನೆರವು ಯಾಚಿಸಿ ಕಳೆದ 8 ದಿನಗಳಿಂದ ಕೊಪ್ಪ ಪಟ್ಟಣದ ತಾಲೂಕು ಕಚೇರಿ ಎದುರು ತಾಲೂಕಿನ ಹಲವು ಸಂಘಟನೆಗಳ ಬೆಂಬಲದೊಂದಿಗೆ ಧರಣಿ ಕೈಗೊಂಡಿದ್ದರು.

ಈ ಮಧ್ಯೆ ಸರಕಾರ ಸಂಸ್ಥೆಯ ಮುಖಂಡರನ್ನು ಮಾತುಕತೆಗೆ ಕರೆದಿದ್ದು, ಸರಕಾರದ ಪರವಾಗಿ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಸಂಸ್ಥೆಯ ಮುಖಂಡರೊಂದಿಗೆ ಬೆಂಗಳೂರಿನಲ್ಲಿ ಮಾತುಕತೆ ನಡೆಸಿದ್ದರು. ಈ ಮಾತುಕತೆಯಲ್ಲಿ ಸಂಸ್ಥೆಯ ಮುಖಂಡರು ಸರಕಾರಿ ಸಾರಿಗೆ ಬಸ್‍ಗಳು ಹಾಗೂ ಬಿಎಂಟಿಸಿ ಬಸ್‍ಗಳಿಗೆ ನೀಡುವ ಸೌಲಭ್ಯಗಳನ್ನು ನೀಡುವಂತೆ ಮನವಿ ಮಾಡಿದ್ದು, ಸರಕಾರ ಈ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು. ಮಾತುಕತೆ ನಡೆದರೂ ಕಾರ್ಮಿಕರು ಕೊಪ್ಪ ಪಟ್ಟಣದಲ್ಲಿ ಧರಣಿಯನ್ನು ಮುಂದುವರಿಸಿದ್ದರು. ಆದರೆ ಸೋಮವಾರ ಮಾಜಿ ಸಚಿವ ಡಿ.ಎನ್.ಜೀವರಾಜ್ ಧರಣಿ ಸ್ಥಳಕ್ಕೆ ಆಗಮಿಸಿ ಕಾರ್ಮಿಕರೊಂದಿಗೆ ಸಂಧಾನ ಮಾತುಕತೆ ನಡೆಸಿದ್ದಾರೆಂದು ತಿಳಿದು ಬಂದಿದ್ದು, ಸಂಸ್ಥೆ ಸರಕಾರಕ್ಕೆ ಸಲ್ಲಿಸಿರುವ ಬೇಡಿಕೆಗಳ ಶೀಘ್ರ ಈಡೇರಿಕೆಗೆ ತಾನು ಸಿಎಂ ಹಾಗೂ ಸಾರಿಗೆ ಸಚಿವರೊಂದಿಗೆ ಮಾತನಾಡಿದ್ದು, ನಾಲ್ಕು ದಿನದಲ್ಲಿ ಭರವಸೆ ಈಡೇರಲಿದೆ. ಈ ಹಿನ್ನೆಲೆಯಲ್ಲಿ ಧರಣಿಯನ್ನು ಕೈಬಿಡುವಂತೆ ಜೀವರಾಜ್ ಮನವೊಲಿಸಿದ್ದಾರೆಂದು ತಿಳಿದುಬಂದಿದೆ.

ಜೀವರಾಜ್ ಸಂದಾನಕ್ಕೆ ಒಪ್ಪಿದ ಕಾರ್ಮಿಕರು ಸರಕಾರಕ್ಕೆ ಸಂಸ್ಥೆಯ ಬೇಡಿಕೆಗಳ ಈಡೇರಿಕೆಗೆ ನಾಲ್ಕು ದಿನಗಳ ಕಾಲಾವಕಾಶ ನೀಡಿದ್ದು, ಧರಣಿ ಕೈಬಿಡುತ್ತೇವೆ, ಆದರೆ ಸಹಕಾರಿ ಸಾರಿಗೆ ಬಸ್‍ಗಳನ್ನು ರಸ್ತೆಗಿಳಿಸುವುದಿಲ್ಲ, ಸರಕಾರದ ಭರವಸೆ ಈಡೇರಿದ ಬಳಿಕವೇ ಬಸ್‍ಗಳ ಓಡಾಟ ಆರಂಭಿಸುವುದಾಗಿ ಷರತ್ತು ವಿಧಿಸಿದ್ದಾರೆಂದು ತಿಳಿದು ಬಂದಿದೆ.

ಸಂಸ್ಥೆಯ ಸಮಸ್ಯೆಗಳ ಬಗ್ಗೆ ಸರಕಾರದೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಸರಕಾರ ಸಂಸ್ಥೆಯ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ. ಸರಕಾರದ ಭರವಸೆ ನಡುವೆಯೂ ಕಾರ್ಮಿಕರು ಧರಣಿ ಮುಂದುವರಿಸಿದ್ದೆವು. ಸೋಮವಾರ ಧರಣಿ ಸ್ಥಳಕ್ಕೆ ಮಾಜಿ ಸಚಿವ ಜೀವರಾಜ್ ಬಂದು ಸರಕಾರ ಶೀಘ್ರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿ ಧರಣಿ ಕೈಬಿಡಲು ಕೇಳಿಕೊಂಡಿದ್ದಾರೆ. ನಾವು ಅವರಿಗೆ ನಾಲ್ಕು ದಿನಗಳ ಕಾಲ ಕಾಲಾವಕಾಶ ನೀಡಿ ಧರಣಿಯನ್ನು ಸೋಮವಾರ ಸಂಜೆ ಕೈಬಿಟ್ಟಿದ್ದೇವೆ. ಡೀಸೆಲ್ ಬೆಲೆ ರಿಯಾಯಿತಿ, ರಿಯಾಯಿತಿ ಬಸ್‍ಪಾಸ್ ನೀಡಿದ ಸಬ್ಸಿಡಿ ಸೇರಿದಂತೆ ಕೆಲ ಬೇಡಿಕೆಗಳನ್ನು ಸರಕಾರ ಈಡೇರಿಸುವ ಭರವಸೆ ನೀಡಿದೆ. ಇಂದು ಧರಣಿ ಕೈ ಬಿಟ್ಟಿದ್ದೇವೆ, ಆದರೆ ಬಸ್‍ಗಳ ಸಂಚಾರನ್ನು ಆರಂಭಿಸುವುದಿಲ್ಲ. ಸಂಸ್ಥೆಯ ಬೇಡಿಕೆಗಳನ್ನು ಸರಕಾರ ಈಡೇರಿಸಿದ ಬಳಿಕವೇ ಬಸ್‍ಗಳ ಓಡಾಟ ಆರಂಭಿಸಲಾಗುವುದು. ಸಹಕಾರ ಸಾರಿಗೆ ಬಸ್‍ಗಳ ಮಾರ್ಗದಲ್ಲಿ ಸದ್ಯ ಕೆಎಸ್ಸಾರ್ಟಿಸಿ ಬಸ್‍ಗಳು ಓಡುತ್ತಿರುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚು ಸಮಸ್ಯೆ ಆಗುತ್ತಿಲ್ಲ.

- ಧರ್ಮಪ್ಪ, ಅಧ್ಯಕ್ಷ, ಸಹಕಾರಿ ಸಾರಿಗೆ, ಕೊಪ್ಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News