'ಭೂಮಿ ಚಪ್ಪಟೆ' ಎಂಬ ಪ್ರತಿಪಾದನೆಯ ವ್ಯಕ್ತಿ ರಾಕೆಟ್ ಅಪಘಾತದಲ್ಲಿ ಮೃತ್ಯು

Update: 2020-02-25 04:54 GMT

ಲಾಸ್‌ಎಂಜಲೀಸ್: ಭೂಮಿ ಚಪ್ಪಟೆಯಾಗಿದೆ ಎಂದು ನಿರೂಪಿಸಲು ಹೊರಟ ಹವ್ಯಾಸಿ ಅಮೆರಿಕನ್ ಬಾಹ್ಯಾಕಾಶತಜ್ಞ ತಾವೇ ನಿರ್ಮಿಸಿದ ರಾಕೆಟ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವಿಜ್ಞಾನ ವಾಹಿನಿ ಪ್ರಕಟಿಸಿದೆ.

ಈ ವಾಹಿನಿ ರಾಕೆಟ್ ಉಡಾವಣೆಯ ಚಿತ್ರೀಕರಣ ಮಾಡಿತ್ತು.

ಮೈಕೆಲ್ (ಮ್ಯಾಡ್ ಮೈಕ್) ಹಗ್ಸ್ ತಾವೇ ನಿರ್ಮಿಸಿದ ರಾಕೆಟ್ ಉಡಾಯಿಸುವ ಪ್ರಯತ್ನದಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಕಷ್ಟದ ಕಾಲದಲ್ಲಿ ಅವರ ಕುಟುಂಬ ಹಾಗೂ ಸ್ನೇಹಿತರ ಜತೆ ನಾವು ಪ್ರಾರ್ಥಿಸುತ್ತಿದ್ದೇವೆ ಎಂದು ಡಿಸ್ಕವರಿ ಚಾನಲ್‌ನ ಭಾಗವಾಗಿರುವ ಈ ವಿಜ್ಞಾನ ವಾಹಿನಿ ಟ್ವೀಟ್ ಮಾಡಿದೆ.

ವೃತ್ತಿಯಲ್ಲಿ ಸ್ಟಂಟ್‌ಮನ್ ಆಗಿರುವ ಹಗ್ಸ್ (64) ಹಬೆ ಚಾಲಿತ ರಾಕೆಟನ್ನು ಉಡಾಯಿಸುವ ಪ್ರಯತ್ನದಲ್ಲಿದ್ದರು. ಕ್ಯಾಲಿಫೋರ್ನಿಯಾದ ಬರ್‌ಸ್ಟೊದಲ್ಲಿನ ತಮ್ಮ ನಿವಾಸದಲ್ಲೇ ಇದನ್ನು ಅಭಿವೃದ್ಧಿಪಡಿಸಿದ್ದರು. ಹಲವು ಬ್ರಾಂಡ್‌ಗಳು ಈ ಯೋಜನೆಗೆ ಪ್ರಾಯೋಜಕತ್ವ ನೀಡಿದ್ದವು.

ಭೂಮಿ ವೃತ್ತಾಕಾರವಾಗಿಲ್ಲ; ಬದಲಾಗಿ ಚಪ್ಪಟೆಯಾಗಿದೆ ಎಂದು ನಿರೂಪಿಸುವ ಸಲುವಾಗಿ ರಾಕೆಟನ್ನು 1500 ಮೀಟರ್ ಎತ್ತರಕ್ಕೆ ಚಿಮ್ಮಿಸುವುದು ಅವರ ಯೋಜನೆಯಾಗಿತ್ತು. ಆದರೆ ಈ ಪ್ರತಿಪಾದನೆ ರಾಕೆಟ್ ಉಡಾವಣೆಗೆ ಪ್ರಚಾರ ಪಡೆಯುವ ತಂತ್ರವಾಗಿತ್ತು ಎಂದು ವಕ್ತಾರ ಡರೆನ್ ಶಸ್ಟೆರ್ ಹೇಳಿದ್ದಾರೆ.

ಶನಿವಾರ ಈ ಘಟನೆ ನಡೆದಿದ್ದು, ಮರುಭೂಮಿಯಲ್ಲಿ ರಾಕೆಟ್ ಉಡಾವಣೆ ಸಂದರ್ಭದ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ರವಿವಾರ ಹರಿದಾಡಿವೆ. ಉಡಾವಣೆಯ ತಕ್ಷಣವೇ ಪ್ಯಾರಾಚೂಟ್ ರಾಕೆಟ್‌ನಿಂದ ಹರಿದಿದ್ದು ಕಂಡುಬರುತ್ತಿದೆ. ತಕ್ಷಣವೇ ಉಡಾವಣೆ ಸ್ಥಳದಿಂದ ಹಲವು ನೂರು ಮೀಟರ್‌ಗಳ ದೂರಕ್ಕೆ ಬಾಹ್ಯಾಕಾಶ ನೌಕೆ ಎಸೆಯಲ್ಪಟ್ಟಿತು. ಉಡಾವಣೆಗೆ ಮುನ್ನ ಕೆಂಪು- ಕಪ್ಪು ಬಾಹ್ಯಾಕಾಶ ಸೂಟ್‌ನೊಂದಿಗೆ ರಾಕೆಟ್‌ನೆದುರು ಛಾಯಾಚಿತ್ರಗಳಿಗೆ ಫೋಸ್ ನೀಡಿದ ಹಗ್ಸ್, ಈ ಉಡಾವಣೆಯನ್ನು ಡಿಸ್ಕವರಿ ಚಾನಲ್‌ನಲ್ಲಿ ಪ್ರಸಾರ ಮಾಡುವ ಉದ್ದೇಶವಿದೆ ಎಂದು ಹೇಳಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News