ಎಸೆಸೆಲ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಯಾವುದೇ ಕಾರಣಕ್ಕೂ ಸೋರಿಕೆಯಾಗುವುದಿಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್

Update: 2020-02-25 08:21 GMT

ಮೈಸೂರು: ಎಸೆಸೆಲ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಯಾವುದೇ ಕಾರಣಕ್ಕೂ ಸೋರಿಕೆಯಾಗುವುದಿಲ್ಲ, ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ನಗರದ ಕಾರ್ಮೆಲ್ ಇಂಗ್ಲಿಷ್ ಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಸೋರಿಕೆಯಾಗಿರಲಿಲ್ಲ, ಮುಖ್ಯೋಪಾದ್ಯಾರ ಬಳಿ ಕೊಟ್ಟಿದ್ದರಿಂದ ಕೆಲವು ಮುಖ್ಯೋಪಧ್ಯಾರು ವಾಟ್ಸ್ ಆ್ಯಪ್ ಮೂಲಕ ಹರಿಯಬಿಟ್ಟಿದ್ದರು. ಇನ್ನು ಮುಂದೆ ಅಂತಹ ತಪ್ಪುಗಳಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.

ಅಂತಿಮ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಖಜಾನೆಯಲ್ಲಿ ಭದ್ರವಾಗಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತೆರವು ಮಾಡಲಾಗುವುದು. ಇದರ ಬಗ್ಗೆ ಕಟ್ಟುನಿಟ್ಟಿನ ನಿಗಾವಹಿಸಲಾಗುವುದು. ಹಾಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಇನ್ನು ಪರೀಕ್ಷೆಗೆ ಕೇವಲ 31 ದಿನ ಬಾಕಿ ಇದೆ. ವಿದ್ಯಾರ್ಥಿಗಳು ಇದನ್ನು ಒಂದು ವ್ರತದ ರೀತಿಯಲ್ಲಿ ತೆಗೆದುಕೊಂಡು ಬಹಳ ಸಂತೋಷದಿಂದ ಅಭ್ಯಾಸ ಮಾಡಿ ಯಾವುದೇ ಒತ್ತಡಕ್ಕೆ ಒಳಗಾಗಬೇಡಿ ಎಂದು ಸಲಹೆ ನೀಡಿದರು. ಪಠ್ಯಪುಸ್ತಕದಲ್ಲಿರುವುದನ್ನು ಬಿಟ್ಟು ಬೇರೆ ಓದಬೇಡಿ, ಪಠ್ಯಪುಸ್ತಕದಲ್ಲಿರುವ ವಿಷಯವೇ ಪ್ರಶ್ನೆಯಾಗಲಿದೆ. ಹಾಗಾಗಿ ಅದನ್ನು ಹೆಚ್ಚು ಓದುವಂತೆ ಹೇಳಿದರು.

ಎಸೆಸೆಲ್ಸಿ ಜೀವನದ ಮೊದಲ ಪರೀಕ್ಷೆ ಹಾಗಾಗಿ ಯಾರೂ ಇದನ್ನು ದೊಡ್ಡದು ಎಂದು ಭಾವಿಸಬಾರದು, ಜೀವನದ ಪರೀಕ್ಷೆಗಿಂತ ಇದು ದೊಡ್ಡದಲ್ಲಾ, ಹಾಗಾಗಿ ಆತಂಕ ಭಯ ಪಡದೆ ಪರೀಕ್ಷೆ ಎದುರಿಸಿ. ನಾನು ಪ್ರತಿನಿತ್ಯ ಪರೀಕ್ಷೆಯನ್ನು ಎದುರಿಸುತಿದ್ದೇನೆ. ದಿನನಿತ್ಯ ಆ ಶಾಲೆಯಲ್ಲಿ ಸಮಸ್ಯೆ, ಈ ಶಾಲೆಯಲ್ಲಿ ಸಮಸ್ಯೆ ಎಂಬ ಪರೀಕ್ಷೆಯನ್ನು ಎದುರಿಸುತಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News