'ಪಾಕಿಸ್ತಾನ್ ಝಿಂದಾಬಾದ್' ಘೋಷಣೆ ಪ್ರಕರಣ: ಎಐಎಂಐಎಂ ಮುಖಂಡ ಗುರುಶಾಂತ ಪಟ್ಟೇದಾರ್ ಗೆ ಎಸ್ಐಟಿ ನೋಟಿಸ್

Update: 2020-02-25 14:16 GMT

ಕಲಬುರಗಿ: ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಅಮೂಲ್ಯ ಎಂಬಾಕೆ 'ಪಾಕಿಸ್ತಾನ್ ಝಿಂದಾಬಾದ್' ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಎಐಎಂಐಎಂನ ಮುಖಂಡ ಗುರುಶಾಂತ ಪಟ್ಟೇದಾರ್ ಅವರಿಗೆ ಎಸ್ಐಟಿ ನೋಟಿಸ್ ಜಾರಿ‌ ಮಾಡಿದೆ.

ಬೆಂಗಳೂರಿನಲ್ಲಿ ನಡೆದ ಪೌರತ್ವ ವಿರೋಧಿ ಸಮಾವೇಶದಲ್ಲಿ ಅಮೂಲ್ಯ ಲಿಯೋನ್ ಈ ಘೋಷಣೆ ಕೂಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದ ಆಯೋಜಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಪೈಕಿ ಕಲಬುರಗಿಯ ಎಐಎಂಐಎಂ ಮುಖಂಡ ಗುರುಶಾಂತ ಪಟ್ಟೇದಾರ್ ಅವರಿಗೂ ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಅಮೂಲ್ಯ ಘೋಷಣೆ ಕೂಗುವ ಐದು ನಿಮಿಷಗಳ ಮುಂಚೆ ಪಟ್ಟೇದಾರ್ ಭಾಷಣ ಮಾಡಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ. ಖುದ್ದು ಹಾಜರಾಗಿ ಪೊಲೀಸರಿಗೆ ವಿವರಣೆ ನೀಡಲಿರುವುದಾಗಿ ಪಟ್ಟೇದಾರ್ ತಿಳಿಸಿದ್ದಾರೆ.

ನೋಟಿಸ್‌ನಲ್ಲಿ ಏನಿದೆ?: ಫೆ.20ರಂದು ಸಿಎಎ ಕಾಯ್ದೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ವಿದ್ಯಾರ್ಥಿನಿ ಅಮೂಲ್ಯ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು, ಇದು ಜನರ ಮಧ್ಯೆ ದ್ವೇಷ ಭಾವನೆ ಹುಟ್ಟು ಹಾಕುತ್ತದೆ. ಈ ಸಂಬಂಧ ರಾಜದ್ರೋಹ ಆರೋಪ 124(ಎ), 153(ಎ), 153(ಬಿ) ರೀತಿಯ ಪ್ರಕರಣ ದಾಖಲಾಗಿದೆ. ಈ ಪ್ರತಿಭಟನೆಯಲ್ಲಿ ತಾವು ಮುಖ್ಯ ಅತಿಥಿಯಾಗಿ ಭಾಗಿಯಾಗಿ ಭಾಷಣ ಮಾಡಿದ್ದು, ತನಿಖೆಯಲ್ಲಿ ತಮ್ಮ ವಿಚಾರಣೆ ಅತ್ಯಗತ್ಯವಾಗಿರುವುದರಿಂದ ಕೂಡಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಗುರುಶಾಂತ ಪಟ್ಟೇದಾರ್ ಅವರಿಗೆ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News