ಸೋದರರಂತಿರುವ ಅಲ್ಪಸಂಖ್ಯಾತರನ್ನು ದೇಶದಿಂದ ಹೊರಹಾಕಲು ಸಾಧ್ಯವೆ?: ಡಿಸಿಎಂ ಅಶ್ವಥ್ ನಾರಾಯಣ

Update: 2020-02-25 12:45 GMT

ರಾಯಚೂರು, ಫೆ.25: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹೊಸ ವಿಷಯ ಅಲ್ಲ, ಸ್ವಾತಂತ್ರ್ಯ ನಂತರದಲ್ಲಿ ಜವಾಹರಲಾಲ್ ನೆಹರು ಅವರಿಂದ ಆರಂಭಿಸಿ ಮನಮೋಹನ್ ಸಿಂಗ್ ವರೆಗೆ ಎಲ್ಲರೂ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡಿದ್ದಾರೆ. ಆದರೆ, ಈಗ ಅವರ ಪಕ್ಷದವರೇ ಗೊಂದಲ ಸೃಷ್ಟಿಸುತ್ತಿರುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದ್ದಾರೆ. 

ಮಂಗಳವಾರ ರಾಯಚೂರಿನಲ್ಲಿರುವ ಗುಲ್ಬರ್ಗ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಹೊಸದಾಗಿ ಚರ್ಚೆ ಆಗುತ್ತಿಲ್ಲ. ಆದರೆ ಈಗ ಈ ಬಗ್ಗೆ ಅಪಪ್ರಚಾರ ನಡೆಸಿ ಭಯದ ವಾತಾವರಣ ಮೂಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸೋದರರಂತೆ ಬಾಳುತ್ತಿರುವ ಅಲ್ಪಸಂಖ್ಯಾತರನ್ನು ದೇಶದಿಂದ ಹೊರಗೆ ಹಾಕಲು ಸಾಧ್ಯವೇ? ಯಾವುದೇ ಕಾರಣಕ್ಕೂ ನಮ್ಮ ದೇಶದಲ್ಲಿ ಇಂಥ ಘಟನೆ ನಡೆಯದು. ಪ್ರತಿಪಕ್ಷಗಳು ಈ ಬಗ್ಗೆ ಅಪಪ್ರಚಾರ ಮಾಡಿ, ಗೊಂದಲ ಸೃಷ್ಟಿಸುತ್ತಿವೆ. ಇದರಿಂದ ಸಮಾಜದಲ್ಲಿ ವೈಮನಸ್ಸು ಮೂಡುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅವರು ಹೇಳಿದರು.

ಶೀಘ್ರದಲ್ಲೆ ರಾಯಚೂರು ವಿವಿ ಆರಂಭ: ರಾಯಚೂರಿನಲ್ಲಿ ಶೀಘ್ರದಲ್ಲೇ ವಿಶ್ವವಿದ್ಯಾಲಯ ಆರಂಭಿಸಲಾಗುವುದು. ಈಗಾಗಲೇ 250 ಎಕರೆ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ಕೇಂದ್ರ ಇರುವುದರಿಂದ ಹೊಸ ವಿವಿ ಸ್ಥಾಪನೆ ಕಷ್ಟವಿಲ್ಲ. ವಿವಿ ಸ್ಥಾಪನೆ ಸಂಬಂಧ ಹಳೆಯ ಪ್ರಸ್ತಾವನೆ ತಿರಸ್ಕೃತಗೊಂಡ ನಂತರ, ಇದ್ದ ಆಕ್ಷೇಪಗಳನ್ನು ಸರಿಪಡಿಸಿ ಹೊಸ ಪ್ರಸ್ತಾವನೆಗೆ ಸಂಪುಟದ ಅನುಮೋದನೆ ಪಡೆದು ವಿಧಾನಸಭೆಯಲ್ಲಿ ಮಂಡಿಸಲಾಗಿದೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News