ಭಾರತ ಭೇಟಿಯಿಂದ ಟ್ರಂಪ್ ಆರ್ಥಿಕತೆ ಮಾತ್ರ ಹೆಚ್ಚಾಗಲಿದೆ: ಸೀತಾರಾಮ್ ಯೆಚೂರಿ

Update: 2020-02-25 12:51 GMT

ಬೆಳಗಾವಿ, ಫೆ.25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿರುವುದು ಇಲ್ಲಿರುವ ಆರ್ಥಿಕತೆ ಹೆಚ್ಚು ಮಾಡಲು ಅಲ್ಲ. ಬದಲಾಗಿ ತನ್ನ ಆರ್ಥಿಕತೆ ಹೆಚ್ಚು ಮಾಡಲು ಎಂದು ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ತಿಳಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಿಂದ ಭಾರತಕ್ಕೆ ಯಾವುದೇ ಲಾಭವಿಲ್ಲ. ಆ ದೇಶದ ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಅವರು ಇಲ್ಲಿಗೆ ಬಂದಿದ್ದಾರೆ. ಇನ್ನು, ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದಾಗ, ಗಾಂಧೀಜಿ ಬಗ್ಗೆಯೇ ಅವರು ಬರೆದಿಲ್ಲ ಎಂದರು.

ಬಿಗ್ ಡೀಲ್ ಮಾಡಿಕೊಂಡು ಬರುತ್ತೇನೆ ಎಂದು ಟ್ರಂಪ್ ಭಾರತಕ್ಕೆ ಬರುವ ಮುನ್ನ ಹೇಳಿದ್ದಾರೆ. ಅಮೆರಿಕದ ರೈತರಿಗೆ ವಿನಾಯಿತಿ ಕೇಳುವುದಕ್ಕಾಗಿ ಬಂದಿದ್ದಾರೆ. ಅಲ್ಲಿ ಎಂಎನ್‌ಸಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶ ಅವರದು. ಇದರಿಂದ ವಿದೇಶಿ ಉತ್ಪಾದನಾ ವಲಯಕ್ಕೆ ಕೆಡಕುಂಟಾಗಲಿದೆ. ಅಮೆರಿಕ ಒತ್ತಡಗಳಿಗೆ ಭಾರತ ಮಣಿಯಬಾರದು ಎಂದು ಒತ್ತಾಯಿಸಿದರು.

ಜನಗಣತಿಗೆ ವಿರೋಧವಿಲ್ಲ. ಆದರೆ, ಎನ್‌ಆರ್‌ಸಿಗೆ ಪ್ರಬಲ ವಿರೋಧವಿದೆ. ಎನ್‌ಆರ್‌ಸಿಯಿಂದ ಸಂವಿಧಾನಕ್ಕೆ ಬಂದೊದಗಿರುವ ಅಪಾಯ ತಿಳಿಸಿ ಕೊಡಲಾಗುವುದು ಎಂದ ಅವರು, ಗಣತಿ ವೇಳೆ ಇತರ ಪ್ರಶ್ನೆಗಳಿಗೆ ಉತ್ತರಿಸಿ. ಆದರೆ, ಎನ್‌ಸಿಆರ್ ಕುರಿತ ಪ್ರಶ್ನೆಗಳಿಗೆ ಉತ್ತರಿಸಬೇಡಿ ಎಂದರು.

ಎನ್‌ಆರ್‌ಸಿಗೆ 13 ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಈ ದಿಟ್ಟತೆಯನ್ನು ಇತರ ರಾಜ್ಯಗಳೂ ತೋರಿಸಬೇಕು. ಕೇಂದ್ರವು, ಧರ್ಮದ ಆಧಾರದ ಮೇಲೆ ಪೌರತ್ವ ನೀಡಲು ನಿರ್ಧರಿಸಿ ಸಿಎಎ ಮಾಡಿದೆ. ಇದು, ಸಂವಿಧಾನ ವಿರೋಧಿಯಾದುದು. ಈಗಾಗಲೇ ಕಾನೂನುಗಳಿವೆ. ಹೊಸ ಕಾನೂನಿನ ಅಗತ್ಯವಿಲ್ಲ. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಪ್ರತ್ಯೇಕವಾಗಿ ನೋಡಬಾರದು. ಇವೆಲ್ಲವೂ ಒಂದೇ ಪ್ಯಾಕೇಜ್ ಆಗಿವೆ ಎಂದು ಆರೋಪಿಸಿದರು.

ಕೋಮುವಾದಿ ಹಿಂದುತ್ವ ಬಲಗೊಳಿಸುವ ಹುನ್ನಾರ ಅಡಗಿದೆ ಎಂದು ದೂರಿದರು. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದ್ದು, ನಿರುದ್ಯೋಗ ಹೆಚ್ಚಾಗುತ್ತಿದೆ. ಕಾರ್ಖಾನೆಗಳು ಮುಚ್ಚುತ್ತಿವೆ. ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗುತ್ತಿದೆ. ಇದೆಲ್ಲವನ್ನೂ ಮರೆಮಾಚಲು ಸಿಎಎ ತರಲಾಗಿದೆ ಎಂದು ಯೆಚೂರಿ ನುಡಿದರು.

ಮನೆ ಮನೆಗೂ ಅಭಿಯಾನ

ಪೌರತ್ವ(ತಿದ್ದುಪಡಿ) ಕಾಯ್ದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ವಿರೋಧಿಸುವಂತೆ ಜನರಲ್ಲಿ ಅರಿವು ಮೂಡಿಸಲು ಮಾ.1ರಿಂದ 23ರವರೆಗೆ ದೇಶದಾದ್ಯಂತ ಮನೆ ಮನೆಗಳಿಗೆ ತೆರಳಿ ಅಭಿಯಾನ ನಡೆಸಲಾಗುವುದು.

-ಸೀತಾರಾಮ್ ಯೆಚೂರಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಿಪಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News