ರಾಜ್ಯದ ‘ಬಿ’, ‘ಸಿ’ ಶ್ರೇಣಿಯ ದೇವಸ್ಥಾನಗಳಲ್ಲಿಯೂ ‘ಸಪ್ತಪದಿ’ ಸಾಮೂಹಿಕ ವಿವಾಹ: ಸಚಿವ ಶ್ರೀನಿವಾಸ್ ಪೂಜಾರಿ

Update: 2020-02-25 12:55 GMT

ಬೆಳಗಾವಿ, ಫೆ.25: ರಾಜ್ಯದ ‘ಎ’ ಶ್ರೇಣಿಯ ದೇವಸ್ಥಾನಗಳು ಮಾತ್ರವಲ್ಲದೆ ಸಂಪನ್ಮೂಲ ಕ್ರೋಡೀಕರಿಸಿ ‘ಬಿ’ ಮತ್ತು ‘ಸಿ’ ಶ್ರೇಣಿಯ ದೇವಸ್ಥಾನಗಳಲ್ಲಿಯೂ ‘ಸಪ್ತಪದಿ’ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗುತ್ತಿದೆ. ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಅಧಿಕಾರಿಗಳು ಎಲ್ಲ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಬೆಳಗಾವಿಯಂತಹ ದೊಡ್ಡ ಜಿಲ್ಲೆಯಲ್ಲಿ ಕನಿಷ್ಠ ಒಂದು ಸಾವಿರ ಜೋಡಿ ಸಾಮೂಹಿಕ ವಿವಾಹ ಆಯೋಜಿಸಬೇಕು. ಪ್ರತಿ ಜೋಡಿಗೆ ಎಂಟು ಗ್ರಾಂ ಬಂಗಾರ, ವಧುವಿನ ಖಾತೆಗೆ ಹತ್ತು ಸಾವಿರ ರೂ.ಮತ್ತು ವರನಿಗೆ ಐದು ಸಾವಿರ ರೂ.ನೀಡುವುದು ಸೇರಿದಂತೆ ಒಂದು ಜೋಡಿಗೆ 55 ಸಾವಿರ ರೂ.ವೆಚ್ಚವನ್ನು ಸರಕಾರದ ವತಿಯಿಂದ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ವಿವಾಹಕ್ಕೆ ಆಗಮಿಸುವ ವಧು-ವರರ ಎಲ್ಲ ಕುಟುಂಬ ವರ್ಗದವರಿಗೆ ಸೂಕ್ತ ಊಟೋಪಚಾರದ ವ್ಯವಸ್ಥೆ ಕಲ್ಪಿಸುವ ಜತೆಗೆ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಏರ್ಪಡಿಸಬೇಕು. ಮಾ.7ರಂದು ಸಪ್ತಪದಿ ಸಾಮೂಹಿಕ ವಿವಾಹ ಕುರಿತು ವಿಚಾರ ಸಂಕಿರಣ ಏರ್ಪಡಿಸಬೇಕು ಎಂದು ಅಧಿಕಾರಿಗಳಿಗೆ ಶ್ರೀನಿವಾಸ್ ಪೂಜಾರಿ ತಿಳಿಸಿದರು.

ಎ.26ರಂದು ನಡೆಯುವ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಹೆಸರು ನೋಂದಾಯಿಸಲು ಮಾ.27 ಹಾಗೂ ಮೇ 24 ರಂದು ನಡೆಯುವ ವಿವಾಹಕ್ಕೆ ಒಂದು ತಿಂಗಳು ಮುಂಚೆಯೆ ಹೆಸರುಗಳನ್ನು ನೋಂದಾಯಿಸಬಹುದು. ‘ಎ’ ಶ್ರೇಣಿಯ ನೂರು ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಆಯೋಜಿಸಲು ಸರಕಾರ ನಿರ್ಧರಿಸಿತ್ತು. ‘ಎ’ ದರ್ಜೆಯ ದೇವಸ್ಥಾನಗಳಿಲ್ಲದ ಜಿಲ್ಲೆಗಳಲ್ಲಿ ‘ಬಿ’ ಶ್ರೇಣಿಯ ದೇವಸ್ಥಾನಗಳಲ್ಲಿ ವಿವಾಹ ನಡೆಸಲು ಸುತ್ತೋಲೆ ಹೊರಡಿಸಲಾಗಿದೆ ಎಂದು ಅವರು ಹೇಳಿದರು.

ಕೆಲ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಇರುವ ಪ್ರಮುಖ ದೇವಸ್ಥಾನಗಳಲ್ಲಿ ಸರಕಾರದ ವತಿಯಿಂದ ಸಾಮೂಹಿಕ ವಿವಾಹ ನಡೆಸಲು ಅನುಮತಿ ನೀಡಲು ಮನವಿ ಸಲ್ಲಿಸಿದ್ದಾರೆ. ಯಾವುದೇ ಪಕ್ಷದ ಶಾಸಕರಿರಲಿ ಅವರ ಮನವಿ ಮತ್ತು ದೇವಸ್ಥಾನಗಳಲ್ಲಿ ಲಭ್ಯವಿರುವ ಹಣಕಾಸಿನ ಲಭ್ಯತೆ ಆಧರಿಸಿ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಶ್ರೀನಿವಾಸ್ ಪೂಜಾರಿ ತಿಳಿಸಿದರು.

ಖಾಸಗಿ ಅಥವಾ ವಂಶಪಾರಂಪರ್ಯವಾಗಿ ಬಂದ ದೇವಸ್ಥಾನಗಳಲ್ಲಿ ಸಾರ್ವಜನಿಕರಿಂದ ದೇಣಿಗೆ ಹಣ ಬರುತ್ತಿದ್ದರೆ ಸರಕಾರ ಅಲ್ಲಿ ನಿಗಾ ವಹಿಸಬೇಕಾಗುತ್ತದೆ. ಕುಟುಂಬ ಅಥವಾ ನಿರ್ದಿಷ್ಟ ಜನಾಂಗಕ್ಕೆ ಸೇರಿದ ದೇವಸ್ಥಾನಗಳ ವಿಷಯದಲ್ಲಿ ಸರಕಾರ ಮಧ್ಯಪ್ರವೇಶಿಸುವುದಿಲ್ಲ. ಸಾರ್ವಜನಿಕರಿಗೆ ತೊಂದರೆ ಅಥವಾ ದುರಂತಗಳು ಸಂಭವಿಸಿದ ಸಂದರ್ಭಗಳಲ್ಲಿ ಸರಕಾರ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಶಾಸಕರಾದ ಅನಿಲ್ ಬೆನಕೆ, ದುರ್ಯೋಧನ ಐಹೊಳೆ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ, ರವೀಂದ್ರ ಕರಲಿಂಗಣ್ಣವರ, ಸವದತ್ತಿ ಎಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News