ನಳೀನ್ ಕುಮಾರ್ ಕಟೀಲ್‌ಗೆ ರಾಜಕೀಯ ಜ್ಞಾನವೇ ಇಲ್ಲ: ಸಿದ್ದರಾಮಯ್ಯ

Update: 2020-02-25 13:00 GMT

ವಿಜಯಪುರ, ಫೆ.25: ಕನಿಷ್ಠ ರಾಜಕೀಯ ಜ್ಞಾನವಿಲ್ಲದೇ ಇರುವ ನಳಿನ್ ಕುಮಾರ್ ಕಟೀಲ್‌ರನ್ನು ಯಾವ ಕಾರಣಕ್ಕೆ ಅಧ್ಯಕ್ಷರನ್ನಾಗಿ ಮಾಡಿದರೋ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಅವರ 'ಕಾಂಗ್ರೆಸ್ ಮುಳುಗುತ್ತಿರುವ ಹಡಗು' ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಟೀಲುಗೆ ರಾಜಕೀಯ ಜ್ಞಾನವೇ ಇಲ್ಲ. ಅವರು ಸುಖಾಸುಮ್ಮನೆ ಆರೋಪ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಸಂಬಂಧಿಸಿದಂತೆ ಬಿಜೆಪಿ ಶಾಸಕರಲ್ಲಿ ಅಸಮಾಧಾನವಿದೆ. ಆದರೆ, ನನ್ನ ಜತೆ ಇದುವರೆಗೂ ಯಾರೂ ಮಾತನಾಡಿಲ್ಲ. ಬಿಜೆಪಿ ಶಾಸಕರು ರಾಜೀನಾಮೆ ನೀಡುವ ಕುರಿತು ಸಿ.ಎಂ.ಇಬ್ರಾಹಿಂ ಹೇಳಿರುವುದರ ಬಗ್ಗೆ ನನ್ನ ಬಳಿ ಹೆಚ್ಚಿನ ಮಾಹಿತಿಯಿಲ್ಲ ಹಾಗೂ ಈ ಕುರಿತು ಚರ್ಚೆಯೂ ಆಗಿಲ್ಲ. ಹೆಚ್ಚಿನ ಮಾಹಿತಿ ಇಬ್ರಾಹಿಂ ಬಳಿಯಿರಬಹುದು ಎಂದು ಉತ್ತರ ನೀಡಿದರು.

ಶೀಘ್ರದಲ್ಲಿಯೇ ಕೆಪಿಸಿಸಿ ಅಧ್ಯಕ್ಷರ ನೇಮಕ: ಪ್ರದೇಶ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರನ್ನು ಶೀಘ್ರದಲ್ಲಿಯೇ ಹೈಕಮಾಂಡ್ ನೇಮಿಸಲಿದೆ. ಉತ್ತರ ಕರ್ನಾಟಕ, ಪ್ರಾದೇಶಿಕತೆ, ಜಾತಿಯಾಧರಿಸಿಯೇ ಹೈಕಮಾಂಡ್ ಅಧ್ಯಕ್ಷರ ಆಯ್ಕೆ ಮಾಡಲಿದೆ. ಈ ಕುರಿತು ಶೀಘ್ರದಲ್ಲಿಯೇ ಯಾರನ್ನು ನೇಮಿಸಬೇಕೆಂದು ತೀರ್ಮಾನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧಿಸೂಚನೆ ಹೊರಡಿಸಲಿ: ಸುಪ್ರೀಂಕೋರ್ಟ್ ಮಹಾದಾಯಿ ವಿಷಯದ ಕುರಿತು ತೀರ್ಪು ನೀಡಿದೆ. ಈ ಸಂಬಂಧ ಕೂಡಲೇ ನ್ಯಾಯಾಧೀಕರಣ ತೀರ್ಪನ್ನು ಅಧಿಸೂಚನೆ ಹೊರಡಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ದಿಲ್ಲಿ ಪೊಲೀಸರು ಕೇಂದ್ರ ಗೃಹ ಸಚಿವರ ನಿರ್ದೇಶನದಂತೆ ಕೆಲಸ ಮಾಡುತ್ತಾರೆ. ದಿಲ್ಲಿಯ ರಕ್ಷಣೆಯ ಹೊಣೆ ಕೇಂದ್ರ ಗೃಹ ಇಲಾಖೆಗೆ ಸೇರಿದ್ದು. ಅಮೆರಿಕ ಅಧ್ಯಕ್ಷ ಟ್ರಂಪ್ ಬಂದಿದ್ದರೂ, ಅಮಿತ್ ಶಾ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗಲ್ಲ. ಭದ್ರತೆಯ ಉಸ್ತುವಾರಿ ನೋಡಿಕೊಳ್ಳಬೇಕು. ದಿಲ್ಲಿಯಲ್ಲಿಯೂ ಮಂಗಳೂರಿನಲ್ಲಾದ ರೀತಿಯಲ್ಲಿಯೇ ಗಲಾಟೆ ನಡೆಯುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News