ಬಿಎಸ್‌ವೈ ಪುತ್ರ ವಿಜಯೇಂದ್ರ ಸೂಪರ್ ಸಿಎಂ ಅಲ್ಲ: ಸಚಿವ ವಿ.ಸೋಮಣ್ಣ

Update: 2020-02-25 16:05 GMT

ಬಳ್ಳಾರಿ, ಫೆ.25: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶ್ನಾತೀತ ನಾಯಕರಾಗಿದ್ದಾರೆ. ಆದರೆ, ಅವರ ಮಗ ವಿಜಯೇಂದ್ರ ಸೂಪರ್ ಸಿಎಂ ಅಲ್ಲ, ಯಡಿಯೂರಪ್ಪರ ಉತ್ತರಾಧಿಕಾರಿಯೂ ಅಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಹೋರಾಟಗಾರರು. ಅವರು ಹೋರಾಟದ ಮೂಲಕ ರಾಜಕೀಯ ಜೀವನ ಆರಂಭಿಸಿದ್ದು, ಹೋರಾಟದಿಂದಲೇ ಮುಗಿಯಬೇಕು. ಅವರ ಉತ್ತರಾಧಿಕಾರಿ ಕುರಿತ ಯಾವುದೇ ಊಹಾಪೋಹಗಳಿಲ್ಲ. ಅವರೇ ಸಿಎಂ ಆಗಿರುತ್ತಾರೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪಗೆ 78 ವಯಸ್ಸಾಗಿರಬಹುದು. ಅಂದ ಮಾತ್ರಕ್ಕೆ ಸಿಎಂ ಪುತ್ರ ವಿಜಯೇಂದ್ರನೇ ಉತ್ತರಾಧಿಕಾರಿ ಎಂದು ಭಾವಿಸುವುದು ತಪ್ಪು. ನಾನು ನಲವತ್ತೆರಡು ವರ್ಷದಲ್ಲಿ 7 ಸಿಎಂಗಳೊಂದಿಗೆ ಕೆಲಸ ಮಾಡಿದ್ದೇನೆ. ಒಬ್ಬರನ್ನು ಮುಖ್ಯಮಂತ್ರಿ ಮಾಡಲು ಏನು ಮಾಡಲಾಗಿದೆ ಎಲ್ಲಾ ಗೊತ್ತಿದೆ. ಎಲ್ಲ ಅನುಭವವೂ ಇದೆ ಎಂದು ತಿಳಿಸಿದರು.

ಈ ಸರಕಾರದಲ್ಲಿ ವಸತಿ ಸಚಿವ ಸ್ಥಾನ ನೀಡಿರುವುದರ ಬಗ್ಗೆ ನನಗೂ ಕೊಂಚ ಅಳುಕಿದೆ. ಆದರೆ, ಈ ಖಾತೆಯಿಂದ ಜನ ನನ್ನನ್ನು ನಂಬುತ್ತಾರೆ. ಸೋಮಣ್ಣ ಬಂದರೆ ಮನೆ ಕೊಡುತ್ತಾರೆ ಎಂಬ ಭಾವನೆಯಿದೆ. ಅವರ ಭಾವನೆಗೆ ಧಕ್ಕೆಯಾಗದಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಶಾಸಕ ಜಿ. ಸೋಮಶೇಖರರೆಡ್ಡಿ, ಸಂಸದ ದೇವೇಂದ್ರಪ್ಪ, ವಸತಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮ್ ಪ್ರಸಾದ್ ಮನೋಹರ್ ಜತೆಯಲ್ಲಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News